Employee: ಕಂಪನಿ ಕೆಲಸಕ್ಕೆ ಸೇರಿದ ಮೊದಲ ದಿನವೇ ರಾಜೀನಾಮೆ! ಕಾರಣವೇನು ಗೊತ್ತಾ?

Employee
Published on

ಬೆಂಗಳೂರು: ಕೆಲಸ ಆರಂಭಿಸಿದ ಮೊದಲ ದಿನವೇ ಮ್ಯಾನೇಜರ್ ನ ವರ್ತನೆಯಿಂದ ಬೇಸತ್ತು ಉದ್ಯೋಗಿ(Employee)ಯೊಬ್ಬರು ಅದೇ ದಿನ ರಾಜೀನಾಮೆ ನೀಡಿದ್ದಾರೆ. ಈ ವಿಷಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ.

ಉದ್ಯೋಗಿ ಇದನ್ನು ಜನಪ್ರಿಯ ಚರ್ಚಾ ವೇದಿಕೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಂತೆ ಅವರು ಇತ್ತೀಚೆಗೆ ಕಂಪನಿಯೊಂದಕ್ಕೆ ಸಹಾಯಕ ಉತ್ಪನ್ನ ವಿನ್ಯಾಸಕರಾಗಿ ಸೇರಿಕೊಂಡಿದ್ದರು. ವಾರ್ಷಿಕ ರೂ.7 ಲಕ್ಷ ವೇತನ ನೀಡುವುದಾಗಿ ಒಪ್ಪಂದವಾಗಿತ್ತು. ಆದರೆ, ಕೆಲಸಕ್ಕೆ ಸೇರಿದ ಮೊದಲ ದಿನವೇ ತನ್ನ ಮ್ಯಾನೇಜರ್ ತನಗೆ ಹಿಂಸೆ ನೀಡಲು ಯತ್ನಿಸಿದ್ದಾನೆ ಎಂದು ದೂರಿದ್ದಾರೆ.

ವ್ಯವಸ್ಥಾಪಕ ಡ್ಯೂಟಿ ಮುಗಿದ ಮೇಲೂ ಕೆಲಸ ಮಾಡುವಂತೆ ಒತ್ತಾಯಿಸಿದ್ದು, ಓವರ್ ಟೈಂ ಮಾಡಲೇಬೇಕು ಎಂದು ಒತ್ತಾಯಿಸಿದರು. ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡಲು ಮುಂದಾದಾಗ ಮ್ಯಾನೇಜರ್ ನನ್ನ ವಾದವನ್ನು ತಳ್ಳಿಹಾಕಿದರು. ಇದೊಂದು ಅಲಂಕಾರಿಕ ಪದವಾಗಿದ್ದು ಪಾಶ್ಚಿಮಾತ್ಯ ವಿಚಾರಧಾರೆಯಾಗಿದೆ ಎಂದು ಹೇಳಿದರು.

ಮೊದಲ ದಿನವೇ ವೈಯುಕ್ತಿಕ ಬದುಕಿನ ಬಗ್ಗೆ ಗೌರವ ಇಲ್ಲದಿರುವುದು, ಅಪಹಾಸ್ಯ, 12ರಿಂದ 14 ಗಂಟೆ ಕೆಲಸ ಮಾಡುವಂತೆ ಒತ್ತಾಯಿಸಿರುವುದು ಬೇಸರ ತಂದಿತು. ಅವರ ವರ್ತನೆಯು ಸ್ವೀಕಾರಾರ್ಹವಲ್ಲ. ಕರ್ತವ್ಯದ ನಂತರವೂ ಸಂಭಾವನೆ ಇಲ್ಲದೆ ಕೆಲಸ ಮಾಡುವುದು ಕಾನೂನಿಗೆ ವಿರುದ್ಧವಾಗಿದ್ದು, ಪ್ರತಿಯೊಬ್ಬ ಉದ್ಯೋಗಿಗಳನ್ನು ಗೌರವಿಸುವ ಜವಾಬ್ದಾರಿ ಕಂಪನಿಗಳ ಮೇಲಿದೆ. ಹಾಗಾಗಿ ಅದೇ ದಿನ ಮೇಲಧಿಕಾರಿಗಳಿಗೆ ರಾಜೀನಾಮೆ ನೀಡಿ ಇಮೇಲ್ ಕಳುಹಿಸಿದೆ ಎಂದು ತನ್ನ ಆಕ್ಷೇಪಣೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವಿವರಿಸಿದ್ದಾರೆ.

ಇದಾದ ಬಳಿಕ ಮ್ಯಾನೇಜರ್ ವಿಷಾದ ವ್ಯಕ್ತಪಡಿಸಿದರು. ಉದ್ಯೋಗದ ಬಗ್ಗೆ ಇಬ್ಬರಿಗೂ ಬೇರೆ ಬೇರೆ ನಿರೀಕ್ಷೆಗಳಿವೆ ಎಂದು ಅವರು ಹೇಳಿದರು ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ನೆಟ್ಟಿಗರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಚೇರಿಯಲ್ಲಿನ ಕೆಲಸದ ಸಂಸ್ಕೃತಿ ಇಷ್ಟವಾಗದಿದ್ದರೆ ರಾಜೀನಾಮೆ ನೀಡುವುದು ಒಳ್ಳೆಯದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಕಾರ್ಪೊರೇಟ್​ ಸಂಸ್ಕೃತಿ ಬಂದ ಮೇಲೆ ಬಹುತೇಕ ಕಾರ್ಮಿಕರ ಸ್ಥಿತಿ ಇದೇ ಆಗಿದೆ ಎಂದು ಹಲವರು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net