

ಕಡೂರು: ಕ್ಷೇತ್ರದಲ್ಲಿ ಶೋಷಿತ ಸಮುದಾಯಗಳ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಇದಕ್ಕಾಗಿ ಎಲ್ಲ ಸಮುದಾಯಗಳ ಜನರು ಕೈಜೋಡಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ತಾಲೂಕು ವಾಲ್ಮೀಕಿ ಸಮಾಜದಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಜ್ಯದಲ್ಲಿ ಸಮಾಜದ 14 ಜನ ಶಾಸಕರಿದ್ದು, ಮೂವರು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಷೇತ್ರದಲ್ಲಿ ನನ್ನ ಗೆಲುವಿಗೆ ವಾಲ್ಮೀಕಿ ಸಮಾಜದ ಕೊಡುಗೆ ಅಪಾರ ಎಂದರು.
ಸಮಾಜದವರು ನನ್ನ ಮೇಲೆ ವಿಶ್ವಾಸ ಹೊಂದಿದ್ದು, ವಿಶ್ವಾಸಕ್ಕೆ ಧಕ್ಕೆ ಭಾರದಂತೆ ಅಭಿವೃದ್ಧಿ ಚಿಂತನೆಯೊಂದಿಗೆ ಕಾರ್ಯನಿರ್ವಹಿಸಲಾಗುತ್ತದೆ. ವಾಲ್ಮೀಕಿ ಸಮುದಾಯದ ಜನರು ವಾಸಿಸುತ್ತಿರುವ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡಲಾಗುವುದು. ಬೇಡಿಕೆಯಂತೆ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.
ರಾಜಕೀಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಮೀಸಲಾತಿ ದೊರಕುತ್ತಿದೆ. ಸಮಾಜದ ಪುರುಷರಿಗೆ ಅನ್ಯಾಯವಾಗುತ್ತಿದೆ. ಸಮಾಜದ ಪರವಾಗಿ ಸದನದಲ್ಲಿ ಧ್ವನಿಯಾಗಿ ಸರಿಪಡಿಸಲು ಪ್ರಯತ್ನಿಸಲಾಗುವುದು. ಪುರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಕಲ್ಪಿಸಲು ಪ್ರಯತ್ನಿಸಲಾಗುವುದು. ಈಗಾಗಲೇ ಸೋಮನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನವನ್ನು ಈಗಾಗಲೇ ಒದಗಿಸಿಕೊಡಲಾಗಿದೆ ಎಂದರು.
ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಭೀಮಪ್ಪ ಮಾತನಾಡಿ, ವಾಲ್ಮೀಕಿ ಸಮಾಜವು ತನ್ನದೇ ಆದ ಹಿನ್ನೆಲೆ ಹೊಂದಿದ್ದು, ಆದರೆ ಸೂಕ್ತ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಾಜ ಇತ್ತೀಚೆಗೆ ಸಂಘಟನೆ ಆಗುತ್ತಿದೆ. ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ರಾಜ್ಯದಲ್ಲಿ ನಮ್ಮ ಜನಸಂಖ್ಯೆ ನಾಲ್ಕನೇ ಸ್ಥಾನದಲ್ಲಿದೆ. ಸ್ಥಳೀಯ ಪುರಸಭೆ, ಗ್ರಾಪಂ ಚುನಾವಣೆಗಳಲ್ಲಿ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ. ಇದನ್ನು ಸರ್ಕಾರದ ಮಟ್ಟದಲ್ಲಿ ಶಾಸಕರು ಸರಿಪಡಿಸಬೇಕು ಎಂದು ಹೇಳಿದರು.
ಸಮಾಜದ ತಾಲೂಕು ಅಧ್ಯಕ್ಷ ನಂದೀಶ್ ಮದಕರಿ ಮಾತನಾಡಿ, ಕಡೂರು ಕ್ಷೇತ್ರದಲ್ಲಿ ವಾಲ್ಮೀಕಿ ಸಮಾಜವು 10 ಸಾವಿರ ಜನಸಂಖ್ಯೆ ಹೊಂದಿದೆ. ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದೆ ಉಳಿದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಡವರಿದ್ದಾರೆ. ಆದರೂ ಮೂಲ ಸೌಲಭ್ಯ ವಂಚಿತರಾಗುತ್ತಿದ್ದೇವೆ. ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣವಾಗಬೇಕಿದೆ. ಯಾವುದಾದರೂ ವೃತ್ತದಲ್ಲಿ ವಾಲ್ಮೀಕಿ ಪುತ್ಥಳಿ ನಿರ್ಮಿಸಬೇಕು. ಮೀಸಲಾತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ಮುಖಂಡರಾದ ಸುರೇಶ್, ಸಿದ್ರಾಮಪ್ಪ, ಕೆ.ಡಿ.ನಾಗರಾಜ್, ಜೆ.ಪಿ.ನಾಯ್ಕ, ಸೋಮನಹಳ್ಳಿ ಸಂತೋಷ್, ಗಂಗಾಧರಪ್ಪ, ರಮೇಶ್, ವಸಂತಮ್ಮ ಇತರರಿದ್ದರು.