

ಬೆಂಗಳೂರು: ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಆಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆವಾಸದಲ್ಲಿರುವ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ವಿಶೇಷ ತನಿಖಾ ತಂಡ (SIT) ಮೂರನೇ ಚಾರ್ಜ್‌ಶೀಟ್ ಸಲ್ಲಿಸಿದ್ದು, 1691 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಪ್ರಜ್ವಲ್ ರೇವಣ್ಣರ ಕಾಮಕಾಂಡ ಮತ್ತಷ್ಟು ಜಗಜಾಹೀರಾಗಿದೆ.
40 ವರ್ಷದ ಸಂತ್ರಸ್ತೆ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದ ಪ್ರತ್ಯೇಕ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಎಸ್‌ಐಟಿ, ಸೆಪ್ಟೆಂಬರ್ 13ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 1,691 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. ಆರೋಪಿ ಪ್ರಜ್ವಲ್, ಸಂತ್ರಸ್ತೆ ಮೇಲೆ ಬಲವಂತದಿಂದ ಅತ್ಯಾಚಾರ ಎಸಗಿರುವುದು ತನಿಖೆಯಲ್ಲಿ ದೃಧಿಢಪಟ್ಟಿದ್ದು, ಸಾಕ್ಷ್ಯಾಧಾರಗಳನ್ನು ಲಗತ್ತಿಸಲಾಗಿದೆ.
ಹಾಸನದ ಸಂಸದರ ಕ್ವಾರ್ಟರ್ಸ್‌ನಲ್ಲಿಯೇ ಪ್ರಜ್ವಲ್ ರೇವಣ್ಣ, ಸಂತ್ರಸ್ತೆ ಮೇಲೆ ಕೃತ್ಯ ಎಸಗಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿಟ್ಟುಕೊಂಡಿದ್ದರು. ಅತ್ಯಾಚಾರದ ಕುರಿತು ಯಾರಿಗಾದರೂ ತಿಳಿಸಿದರೆ ಪತಿಯನ್ನು ಸಾಯಿಸುವುದಾಗಿ ಹೇಳಿದ್ದ ಪ್ರಜ್ವಲ್ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರಂತೆ. ಈ ಅಂಶವನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದ್ದು, ಪ್ರಜ್ವಲ್ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಲೋಕಸಭೆ ಚುನಾವಣೆ ಮತದಾನಕ್ಕೂ ಮುನ್ನ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ ಎನ್ನಲಾದ ಅಶ್ಲೀಲ ವಿಡಿಯೊಗಳು ವೈರಲ್ ಆಗಿದ್ದವು. ಪ್ರಜ್ವಲ್ ವಿರುದ್ಧ ಮೊದಲು ಹೊಳೆನರಸೀಪುರ ಠಾಣೆಯಲ್ಲಿ ಸಂತ್ರಸ್ತೆಯೊಬ್ಬರು ದೂರು ದಾಖಲಿಸಿದ್ದರು. ಇದಾದ ಬಳಿಕ ಹೊಳೆನರಸೀಪುರದಲ್ಲಿ ಎರಡು ಹಾಗೂ ಸಿ ಐ ಡಿ ಬಳಿ ಒಂದು ಕೇಸ್ ದಾಖಲಾಗಿದ್ದವು.
ಲೈಂಗಿಕ ಹಗರಣ ಹೊರಬರುತ್ತಲೇ ಏಪ್ರಿಲ್ 27 ರಂದು ವಿದೇಶಕ್ಕೆ ಹಾರಿದ್ದ ಪ್ರಜ್ವಲ್ ರೇವಣ್ಣ, ಮೇ 31 ರಂದು ಭಾರತಕ್ಕೆ ಮರಳಿದ್ದರು. ಅದೇ ದಿನ ಪ್ರಜ್ವಲ್‌ರನ್ನು ಬಂಧಿಸಿದ್ದ ಎಸ್ ಐ ಟಿ, ನಾಲ್ಕು ಪ್ರಕರಣಗಳ ಸಂಬಂಧ ಹಂತ - ಹಂತವಾಗಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದೆ. ಪ್ರಜ್ವಲ್ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ.