ಅನಂತ್ಪುರ: ಸೆಪ್ಟೆಂಬರ್ 19ರಿಂದ ಬಾಂಗ್ಲಾದೇಶ ವಿರುದ್ಧ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಈಗಾಗಲೇ ಭಾರತ ತಂಡ ಚೆನ್ನೈನಲ್ಲಿ ಅಭ್ಯಾಸ ಆರಂಭಿಸಿದ್ದು, ಪ್ರವಾಸಿ ತಂಡದ ಎದುರು ತಮ್ಮ ಪಾರುಪತ್ಯವನ್ನು ಮುಂದುವರೆಸಲು ಟೀಮ್ ಇಂಡಿಯಾ ಸಜ್ಜಾಗಿದೆ. ಯಾವುದಾದರು ಸರಣಿ ಶುರುವಾಗುವುದಕ್ಕೂ ಮುನ್ನ ಮಾಜಿ ಮತ್ತು ಅಥವಾ ಹಾಲಿ ಆಟಗಾರರು ಹೇಳಿಕೆ ನೀಡುವುದು ಸಹಜ. ಅದೇ ರೀತಿ ಇದೀಗ ಟೀಮ್ ಇಂಡಿಯಾದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಕುರಿತು ಮಾಜಿ ಆಟಗಾರ ಆಕಾಶ್ ಚೋಪ್ರಾ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಆ ಬಳಿಕ ದಕ್ಷಿಣ ಆಫ್ರಿಕಾ ಹಾಗೂ ರಣಜಿ ಟ್ರೋಫಿಯಲ್ಲಿ ಭಾಗಿಯಾಗದೆ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದಿದ್ದರು. ಇದೀಗ ಟೆಸ್ಟ್ಗೆ ಕಮ್ಬ್ಯಾಕ್ ಮಾಡಿರುವ ಅಯ್ಯರ್‌ಗೆ ಮುಂಬರುವ ಟೂರ್ನಿಗಳ ದೃಷ್ಟಿಯಲ್ಲಿ ಈ ಸರಣಿ ಸವಾಲಿನದ್ದಾಗಿದ್ದು, ಫಾರ್ಮ್ಗೆ ಮರಳಬೇಕಿದೆ. ಈ ಕುರಿತು ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ಮಾತನಾಡಿದ್ದಾರೆ.
ಕಳೆದ ಬಾರಿ ನಾವು ಆತಿಥೇಯರನ್ನು ಅವರ ನೆಲದಲ್ಲಿ ಸೋಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದೆವು. ಈ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಪ್ರದರ್ಶನ ನೀಡುವ ಮೂಲಕ ಅತಿಮುಖ್ಯ ಎನ್ನಿಸಿದ್ದರು. ಅವರು ನಿರ್ಣಾಯಕ ನಾಕ್ ಆಡಿದ್ದರಿಂದ ನಾವು ಗೆದ್ದಿದ್ದೇವೆ, ಆದರೆ ಅಂದಿನಿಂದ, ಜಗತ್ತು ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಆತನ ಪ್ರದರ್ಶನ ನೋಡಿದರೆ ಸದ್ಯಕ್ಕೆ ಟೆಸ್ಟ್‌ನಲ್ಲಿ ಶ್ರೇಯಸ್ ಅಯ್ಯರ್‌ಗೆ ಯಾವುದೇ ಅವಕಾಶಗಳು ಕಾಣುತ್ತಿಲ್ಲ ಎಂಬುದು ನನ್ನ ಅನಿಸಿಕೆ.
ಇದನ್ನೂ ಓದಿ: ಬಳ್ಳಾರಿ ಜೈಲಿನ ರೂಲ್ಸ್ಗೆ ಬೆಂಡಾದ ದರ್ಶನ್; ಇದೊಂದು ಕಾರಣಕ್ಕಾದರೂ ಬೇರೆ ಕಡೆ ಶಿಫ್ಟ್ ಮಾಡಿ ಎಂದ ‘ದಾಸ’
ತಂಡದಲ್ಲಿ ಯಾರೇ ಇದ್ದರೂ ಎಲ್ಲಾ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ. ಸರ್ಫರಾಜ್, ಕೆಎಲ್ ರಾಹುಲ್ ಮತ್ತು ಧ್ರುವ್ ಜುರೆಲ್ ಒಳಗೊಂಡಿರುವ ಈ ತಂಡದ ಭಾಗವಾಗಿದ್ದರೂ ಪ್ಲೇಯಿಂಗ್ 11ಗೆ ಬರಲು ಸಾಧ್ಯವಾಗುವುದಿಲ್ಲ. ಇನ್ನೂ ನನ್ನ ಪ್ರಕಾರ ಶ್ರೇಯಸ್ ಅಯ್ಯರ್‌ಗೆ ತಂಡದ ಭಾಗವಾಗಿದ್ದರೂ ಸ್ಥಾನ ಸಿಗುವುದು ಡೌಟ್ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ಧಾರೆ.
ಸನ್‌ಗ್ಲಾಸ್ ಧರಿಸಿ ಟ್ರೋಲ್ ಆದ ಅಯ್ಯರ್
ದುಲೀಪ್ ಟ್ರೋಫಿಯಲ್ಲಿ ಭಾರತ ಡಿ ತಂಡದ ಮೊದಲ ಇನಿಂಗ್ಸ್‌ನ 4ನೇ ಎಸೆತದಲ್ಲಿ ಆರಂಭಿಕ ಅಥರ್ವ ತೈಡೆ ಔಟಾದ ಬಳಿಕ ವನ್‌ಡೌನ್ ಆಗಿ ಶ್ರೇಯಸ್ ಅಯ್ಯರ್ ಕಣಕ್ಕಿಳಿದರು. ಕೂಲಿಂಗ್ ಗ್ಲಾಸ್ ಧರಿಸಿ ಸ್ಟೈಲಿಶ್ ಆಗಿ ಕ್ರೀಸ್‌ಗಿಳಿದ ಶ್ರೇಯಸ್ 7 ಎಸೆತ ಎದುರಿಸಿ ಡಕೌಟ್ ಆದರು. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಸನ್‌ಗ್ಲಾಸ್‌ನಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜತೆಗೆ ಟ್ರೋಲ್‌ಗೆ ಗುರಿಯಾಗಿದ್ದಾರೆ.