ಸಂತ್ರಸ್ತೆ ಎದುರು ರೇವಣ್ಣ ನಿವಾಸದಲ್ಲಿ ಮಹಜರು ನಡೆಸಿದ ಎಸ್ಐಟಿ

revanna house
Published on

ಬೆಂಗಳೂರು: ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮತ್ತು ಅವರ ಪುತ್ರ ಲೋಕಸಭಾಸದಸ್ಯ ಪ್ರಜ್ವಲ್‌ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ದೂರು ನೀಡಿದ್ದ ಸಂತ್ರಸ್ತೆಯನ್ನು ಸೋಮವಾರ ಬಸವನಗುಡಿಯಲ್ಲಿರುವ ರೇವಣ್ಣ ನಿವಾಸಕ್ಕೆ ಕರೆತಂದ ವಿಶೇಷ ತನಿಖಾ ದಳ(ಎಸ್ಐಟಿ) ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.

ರೇವಣ್ಣ ನಿವಾಸಕ್ಕೆ ನಾಲ್ವರು ಮಹಿಳಾ ಅಧಿಕಾರಿಗಳು ಸೇರಿ ಆರು ಮಂದಿ ಅಧಿಕಾರಿಗಳ ತಂಡವು ಸಂತ್ರಸ್ತೆ ಜೊತೆ ಆಗಮಿಸಿದ್ದರು. ಈ ವೇಳೆ ಸಂತ್ರಸ್ತೆಯ ಹೇಳಿಕೆ, ಮಹಜರು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವೀಡಿಯೋ ಚಿತ್ರೀಕರಣ ಮಾಡಲಾಯಿತು.

ಮಹಜರು ಪ್ರಕ್ರಿಯೆ ನಡೆಸುವ ಮೊದಲು ಮುಂಜಾಗ್ರತಾ ಕ್ರಮವಾಗಿ ರೇವಣ್ಣ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬ್ಯಾರಿಕೇಡ್‌ ಗಳನ್ನು ಹಾಕಲಾಗಿತ್ತು. ಬಸವನಗುಡಿ ಪೊಲೀಸರು ರೇವಣ್ಣ ನಿವಾಸದ ಬಳಿ ಬಿಗಿಭದ್ರತೆ ಏರ್ಪಡಿಸಿದ್ದರು.

ಸಂತ್ರಸ್ತೆಯ ಆರೋಪ ಏನು?:  ರೇವಣ್ಣ ತಮ್ಮ ಕೊಠಡಿಗೆ ಬರುವಂತೆ ಆಹ್ವಾನಿಸಿ ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು. ಮನೆಯ ಸ್ಟೋರ್ ರೂಂನಲ್ಲಿ ಕೈ ಹಿಡಿದು ಎಳೆಯುತ್ತಿದ್ದರು. ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಪ್ರಜ್ವಲ್ ಹಿಂದಿನಿಂದ ಬಂದು ಮೈ ಮುಟ್ಟುತ್ತಾ ಹೊಟ್ಟೆಯನ್ನು ಮುಟ್ಟುತ್ತಿದ್ದರು. ಇದೇ ರೀತಿ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಮಹಿಳೆ ದೂರು ನೀಡಿದ್ದರು.

ತನ್ನ ಮಗಳ ಫೋನ್ ಗೆ ಹಲವು ಬಾರಿ ಪ್ರಜ್ವಲ್ ರೇವಣ್ಣ ವಿಡಿಯೋ ಕಾಲ್ ಮಾಡಿ ಅಸಭ್ಯ ಸಂಭಾಷಣೆ ಮೂಲಕ ಪ್ರಚೋದಿಸಲು ಯತ್ನಿಸಿದ್ದರು ಎಂದು ಮಹಿಳೆ ಆರೋಪಿಸಿದ್ದರು. ಈ ದೂರಿನ ಅನ್ವಯ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಸೆಕ್ಷನ್ ಅಡಿ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net