

TVK: ಇತ್ತೀಚೆಗೆ ತಮಿಳುನಾಡಿನ ಕರೂರ್ನಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸಬೇಕೆಂದು ತಮಿಳುಗ ವೆಟ್ರಿ ಕಳಗಂ (ಟಿವಿಕೆ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಹಿರಿಯ ಐಪಿಎಸ್ ಅಧಿಕಾರಿ ಆಸ್ರಾ ಗರ್ಗ್ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ಘಟನೆಯ ಕುರಿತಾದ ತನಿಖೆಗೆ ನಿರ್ದೇಶನ ನೀಡಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಟಿವಿಕೆ ಪ್ರಶ್ನಿಸಿದೆ.
ಈ ಹಿಂದೆ ಪೊಲೀಸ್ ತನಿಖೆ ಮತ್ತು ಪ್ರಕರಣದಲ್ಲಿ ಅಧಿಕಾರಿಗಳ ಪಾತ್ರವನ್ನು ಪ್ರಶ್ನಿಸಿದ್ದರೂ, ರಾಜ್ಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿಯನ್ನು ಹೈಕೋರ್ಟ್ ರಚಿಸಿದೆ ಎಂದು ಟಿವಿಕೆ ತನ್ನ ಅರ್ಜಿಯಲ್ಲಿ ತಿಳಿಸಿದ್ದು, ಎಸ್‌ಐಟಿ ಟಿವಿಕೆ ವಿರುದ್ಧ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿಕೊಂಡಿದೆ. ಟಿವಿಕೆ ಮುಖ್ಯಸ್ಥ, ನಟ ವಿಜಯ್ ಘಟನೆ ನಡೆದ ಬಳಿಕ ಕಾರ್ಯಕ್ರಮದ ಸ್ಥಳದಿಂದ ಪಲಾಯನ ಮಾಡಿದ್ದು, ನಡೆದ ಈ ಅವಘಡದ ಕುರಿತಾಗಿ ಪಕ್ಷ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂಬ ನ್ಯಾಯಾಲಯದ ಅವಲೋಕನಗಳು ಈಗಾಗಲೇ ತನಿಖೆಯ ಮೇಲೆ ಪ್ರಭಾವ ಬೀರಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು, ಟಿವಿಕೆ ರ್ಯಾಲಿಯಲ್ಲಿ ಬೇಕಂತಲೆ ಈ ರೀತಿಯ ವಾತಾವರಣ ಸೃಷ್ಟಿಸಲು ದುಷ್ಕರ್ಮಿಗಳು ಷಢ್ಯಂತ್ರ ನಡೆಸಿದ್ದಾರೆ ಎನ್ನುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಆರೋಪಿಸಿದೆ.
ಘಟನೆಯ ಕುರಿತಂತೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಟಿವಿಕೆ ನಾಯಕರು ಕಾರ್ಯಕ್ರಮವನ್ನು ನಿರ್ವಹಿಸಿದ ರೀತಿಯ ಬಗ್ಗೆ ಗರಂ ಆಗಿದ್ದು, ಸಂಘಟಕರ ಜವಾಬ್ದಾರಿಯನ್ನು ಪ್ರಶ್ನಿಸಿತ್ತು. ದ್ವಿಚಕ್ರ ವಾಹನಗಳ ಮೇಲೆ ಬಸ್ ಓಡಾಡಿರುವುದು ಮತ್ತು ಪಕ್ಷದ ನಾಯಕ ಆಧವ್ ಅರ್ಜುನ ಅವರ ವಿವಾದಾತ್ಮಕ ಪೋಸ್ಟ್‌ಗಳಂತಹ ಲೋಪಗಳನ್ನು ಸೂಚಿಸುವ ವೀಡಿಯೊ ದೃಶ್ಯಾವಳಿಗಳು ಸೇರಿದಂತೆ ಸಾಕ್ಷ್ಯಗಳನ್ನು ನ್ಯಾಯಾಲಯ ಎತ್ತಿ ತೋರಿಸಿದೆ.
ಇದೇ ವಿಷಯವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಟಿವಿಕೆ ಪ್ರಚಾರ ಕಾರ್ಯದರ್ಶಿ ಅರುಣ್ ರಾಜ್, ಕಾರ್ಯಕ್ರಮದ ಅನುಮತಿ ಪತ್ರವನ್ನು ಡಿಜಿಪಿಗೆ ಇಮೇಲ್ ಮೂಲಕ ಕಳುಹಿಸಲಾಗಿದ್ದು, ವೈಯಕ್ತಿಕವಾಗಿಯೂ ಸಲ್ಲಿಸಲಾಗುವುದು ಎಂದು ಹೇಳಿದರು. ಈಗಾಗಲೇ ವಿಜಯ್ 33 ಕುಟುಂಬಗಳೊಂದಿಗೆ ವಿಡಿಯೋ ಕರೆಯ ಮೂಲಕ ಮಾತನಾಡಿದ್ದು, ನೇರವಾಗಿ ಭೇಟಿಯಾಗುವುದಾಗಿ ಮತ್ತು ಸದಾ ಆ ಕುಟುಂಬಗಳೊಂದಿಗೆ ನಿಲ್ಲುವುದಾಗಿ ಭರವಸೆ ನೀಡಿದರು.
ಎಲ್ಲಾ ಸಂತ್ರಸ್ತರು, ನಟ ವಿಜಯ್ ಕಡೆಯಿಂದ ಯಾವುದೇ ತಪ್ಪಿಲ್ಲ ಎಂದು ಹೇಳಿದರು ಮತ್ತು ಪ್ರಚಾರ ಸಭೆಗಳನ್ನು ಮುಂದುವರಿಸುವಂತೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)