Karur Stampede | ಕರೂರ್​ ಘಟನೆಗೆ ಆಡಳಿತ ವೈಫಲ್ಯವೇ ಕಾರಣ..ಇಬ್ಬರು ಹೆಣ್ಣುಮಕ್ಕಳ ಕಳೆದುಕೊಂಡ ತಂದೆಯ ಆಕ್ರಂದನಕ್ಕೆ ಮೂಕಪ್ರೇಕ್ಷಕವಾದ ಎನ್​​​ಡಿಎ ಟೀಮ್​

Karur Stampede bjp team
Published on

Karur Stampede: ಇತ್ತೀಚೆಗೆ ತಮಿಳುನಾಡಿನ ಕರೂರ್‌ನಲ್ಲಿ ನಟ ವಿಜಯ್ ಅವರ ರ‍್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎನ್‌ಡಿಎ ಸತ್ಯಶೋಧನಾ ತಂಡವು, ಈ ದುರಂತಕ್ಕೆ ಸಂಪೂರ್ಣ ಆಡಳಿತಾತ್ಮಕ ವೈಫಲ್ಯವೇ ಕಾರಣ ಎಂದು ಆರೋಪಿಸಿದೆ ಎಂದು ವರದಿಯಾಗಿದೆ.

ಮಿತಿ ಮೀರಿದ ಜನಸಂದಣಿ..

ಕೇವಲ 2,000-3,000 ಜನರಿಗೆ ಮಾತ್ರ ಸೇರಬಹುದಾದ ಮೈದಾನದಲ್ಲಿ 30,000 ಕ್ಕೂ ಹೆಚ್ಚು ಜನರು ಜಮಾಯಿಸಿದ್ದರು, ಮಧ್ಯಾಹ್ನ ವಿಜಯ್ ಆಗಮಿಸುವ ನಿರೀಕ್ಷೆಯಿದ್ದರಿಂದ ಬೆಳಿಗ್ಗೆ 9 ಗಂಟೆಯಿಂದಲೇ ಜನಸಮೂಹವೇ ಅಲ್ಲಿ ನೆರೆದಿತ್ತು, ಆದರೆ ನಟ ಅಲ್ಲಿಗೆ ಬಂದಿದ್ದು ಸಂಜೆ 7 ಗಂಟೆಗೆ ಆ ಹೊತ್ತಿಗಾಗಲೇ ಕಾರ್ಯಕ್ರಮದ ಸ್ಥಳವು ತುಂಬಿ ತುಳುಕುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಅಲ್ಲಿ ಸೇರಿದ್ದ ಬೆಂಬಲಿಗರನ್ನು ಸ್ವಾಗತಿಸಲು ವಿಜಯ್​​ ತಮ್ಮ ಬಸ್ ಹತ್ತಿದಾಗ ಕಾಲ್ತುಳಿತ ಪ್ರಾರಂಭವಾಯಿತು, ನಂತರದ ನೂಕುನುಗ್ಗಲಿನಲ್ಲಿ, ಮಹಿಳೆಯರು ಮತ್ತು ಮಕ್ಕಳು ತುಳಿದು ಸಾವನ್ನಪ್ಪಿದರು ಮತ್ತು ಅನೇಕರು ಉಸಿರಾಟದ ಸಮಸ್ಯೆಯಿಂದ ಮೂರ್ಛೆ ಹೋದರು, ಹಲವಾರು ಜನ ಅಭಿಮಾನಿಗಳು ಚರಂಡಿಗಳಲ್ಲಿ ಬಿದ್ದು ಜೀವ ಬಿಟ್ಟರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತ್ಯಕ್ಷದರ್ಶಿಗಳ ವಿವರಣೆ

ನಟ ವಿಜಯ್ ನೀರಿನ ಬಾಟಲಿಗಳನ್ನು ಜನಸಮೂಹದತ್ತ ಎಸೆದರು, ಇದರಿಂದಾಗಿ ಅವುಗಳನ್ನು ಹಿಡಿಯಲು ಜನರ ಗುಂಪು ಚದುರಿತು, ಅವರೆಲ್ಲಾ ಕೆಳಗೆ ಬಿದ್ದು ತುಳಿತಕ್ಕೊಳಗಾದರು ಎಂದು ಪ್ರತ್ಯಕ್ಷದರ್ಶಿಗಳು ಬಿಜೆಪಿ ಸಂಸದರಿಗೆ ತಿಳಿಸಿದರು. ಇದಾದ ಬಳಿಕ ಆಸ್ಪತ್ರೆಗೆ ಭೇಟಿ ನೀಡಿದ ಸಂಸದರ ತಂಡ ಚಿಕಿತ್ಸೆ ಪಡೆಯುತ್ತಿದ್ದ 51 ಜನರ ಆರೋಗ್ಯ ವಿಚಾರಿಸಿದರು. ಇದೇ ವೇಳೆ ತನ್ನ 12 ಮತ್ತು 8 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಕಾಲ್ತುಳಿತದಲ್ಲಿ ಕಳೆದುಕೊಂಡ ತಂದೆಯೊಬ್ಬರ ಆಕ್ರಂದನ ಮುಗಿಲು ಮಟ್ಟಿತ್ತು.

ದೀಪಗಳು ಬಂದ್​..

ಕಾಲ್ತುಳಿತ ಸಂಭವಿಸುತ್ತಿದ್ದಂತೆ ರಸ್ತೆಯಲ್ಲಿದ್ದ ದೀಪಗಳು ಆರಿದವು ಮತ್ತು ಜನರೇಟರ್ ವಿಫಲವಾಯಿತು, ಆ ಪ್ರದೇಶ ಸಂಪೂರ್ಣ ಕತ್ತಲೆಯಲ್ಲಿ ಮುಳುಗಿತು ಎಂದು ತಿಳಿದುಬಂದಿದೆ. ಈ ದುರಂತವನ್ನು ತಡೆಗಟ್ಟಬಹುದಾಗಿತ್ತು, ಆದರೆ, ಆಡಳಿತ ಯಂತ್ರ ವಿಫಲವಾಗಿದ್ದು ಇದಕ್ಕೆಲ್ಲಾ ಕಾರಣ ಎಂದು ಸಂಸದರು ನಿಯೋಗ ವರದಿ ತಯಾರಿಸಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net