ಬದುಕಿಗೆ ಸಂಸ್ಕಾರ ನೀಡುವ ಸಂಗೀತ

06bhr 1sangetha
ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಮಹೋತ್ಸವದಲ್ಲಿ ಆಯೋಜಿಸಿದ್ದ ವಿವಿಧ ಗಾಯನ ಸ್ಪರ್ಧೆಯನ್ನು ಗಾಯಕಿ ಸೀತೂರಿನ ರಂಗಿಣಿ ರಾವ್ ಉದ್ಘಾಟಿಸಿದರು. ಚೈತನ್ಯ ವೆಂಕಿ, ಪ್ರಶಾಂತ್‌ಕುಮಾರ್, ವಿದ್ಯಾನಂದ್, ರಾಜಕುಮಾರ್, ಶ್ರೀನಿವಾಸ್ ಇತರರಿದ್ದರು.
Published on

ಬಾಳೆಹೊನ್ನೂರು: ಸಂಗೀತಕ್ಕೆ ಯಾವುದೇ ದೇಶ, ಭಾಷೆಯ ಗಡಿ ಇಲ್ಲವಾಗಿದ್ದು, ಪ್ರತಿಯೊಬ್ಬರ ಬದುಕಿಗೂ ಸಂಗೀತ ಸಂಸ್ಕಾರ ನೀಡಲಿದೆ ಎಂದು ಗಾಯಕಿ ಸೀತೂರಿನ ರಂಗಿಣಿ ರಾವ್ ಹೇಳಿದರು.
ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ 15ನೇ ವರ್ಷದ ನವರಾತ್ರಿ ಮಹೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಭಕ್ತಿಗೀತೆ, ಭಾವಗೀತೆ ಹಾಗೂ ದೇಶಭಕ್ತಿ ಗೀತೆಯ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಬದುಕಿಗೆ ಬಹುದೊಡ್ಡ ಕೊಡುಗೆ ಸಂಗೀತ. ಇದು ವಿಶ್ವ ಭಾಷೆಯಾಗಿದೆ. ಸಂಗೀತ ವಿಶ್ವದ ಬಹು ದೊಡ್ಡ ಮಾಧ್ಯಮ ಎಂದರೆ ಅತಿಶಯೋಕ್ತಿಯಲ್ಲ. ಅಂತರಂಗ, ಹೃದಯದ ಭಾಷೆಯಾಗಿದೆ. ಪ್ರತಿಯೊಬ್ಬರ ಬದುಕಿಗೆ ಅತಿ ಅವಶ್ಯಕವಾಗಿದೆ ಎಂದರು.
ಎನ್.ಆರ್.ಪುರ ಜೆಸಿಐ ಪೂರ್ವಾಧ್ಯಕ್ಷ ವಿದ್ಯಾನಂದ್ ಮಾತನಾಡಿ, ಸಂಗೀತ ಎಲ್ಲ ಕ್ಷೇತ್ರಗಳಲ್ಲೂ ಆವರಿಸಿಕೊಂಡಿದೆ. ಪ್ರಕೃತಿ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ, ಶಿಕ್ಷಣ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಸಂಗೀತದ ಕೊಡುಗೆ ಇದೆ. ವಿಶ್ವದಲ್ಲಿ ಭಾರತೀಯ ಸಂಗೀತಕ್ಕೆ ವಿಶೇಷ ಮಹತ್ವವಿದ್ದು ಎಲ್ಲೆಡೆಯೂ ಇದರ ಮಹತ್ವದ ಅರಿವಿದೆ. ಸಂಗೀತವನ್ನು ಆರಾಧಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ನಿವೃತ್ತ ಶಿಕ್ಷಕ ರಾಜಕುಮಾರ್ ಮಾತನಾಡಿ, ಸಂಗೀತ ಪ್ರತಿಯೊಬ್ಬರ ಮನಸ್ಸಿಗೂ ಆಹ್ಲಾದ ನೀಡಲಿದ್ದು ಒತ್ತಡ, ದುಃಖದ ಸಂದರ್ಭದಲ್ಲಿ ಸಂಗೀತ ಆಲಿಸುವುದರಿಂದ ದುಃಖ ಮರೆಯಾದರೆ, ಸಂತೋಷದ ಸಂದರ್ಭದಲ್ಲಿ ಆಲಿಸಿದರೆ ಸಂತಸ ಇಮ್ಮಡಿಗೊಳ್ಳಲಿದೆ.
ಭಾರತದಲ್ಲಿ ಹಲವು ಸಂಗೀತ ಪ್ರಾಕಾರಗಳಿದ್ದು, ಎಲ್ಲವೂ ಒಂದೊಂದು ವಿಶೇಷ ಹೊಂದಿವೆ. ಗ್ರಾಮೀಣ ಭಾಗಗಳಲ್ಲಿ ಜನಪದ ಸಂಗೀತ, ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತಿ ಸಂಗೀತ, ಚಲನಚಿತ್ರಗಳಲ್ಲಿ ವಿಶೇಷ ಹಾಡುಗಳು ಇವೆ ಎಂದರು.
ದುರ್ಗಾದೇವಿ ಸಮಿತಿ ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಉಪಾಧ್ಯಕ್ಷ ಶಿವರಾಮ್ ಶೆಟ್ಟಿ, ಸಹ ಖಜಾಂಚಿ ಚೈತನ್ಯ ವೆಂಕಿ, ಗಾಯಕರಾದ ಸುಧಿ ಎನ್.ಆರ್.ಪುರ, ಕಡೂರು ಶ್ರೀನಿವಾಸ್, ಸಮಿತಿ ಪದಾಧಿಕಾರಿಗಳಾದ ಕೆ.ಪ್ರಶಾಂತ್‌ಕುಮಾರ್, ಮನುಕುಮಾರ್, ಎ.ಸಿ.ಕೃಷ್ಣಮೂರ್ತಿ ಗಿರೀಶ್ ಬಂದಿಯಡ್ಕ, ನಟರಾಜ್ ಶೆಟ್ಟಿ, ಎಂ.ನಾರಾಯಣ, ಈಶ್ವರ್ ಇಟ್ಟಿಗೆ, ವಿದ್ಯಾ ಶೆಟ್ಟಿ, ಸುಚಿತಾ ಹೆಗ್ಡೆ, ರಾಜಪ್ಪ ಗೌಡ, ದಿನೇಶ್ ತುಪ್ಪೂರು, ಎಂ.ನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net