

ಅಹಮದಾಬಾದ್: ಹೆತ್ತ ಮಗಳಿಗೆ ನಯವಾಗಿ ಬುದ್ಧಿ ಹೇಳಿ, ತಿದ್ದಿ ತೀಡಬೇಕಿದ್ದ ತಂದೆಯೇ (Father) ಪುತ್ರಿಗೆ ಅನ್ನ ಬೇಯಿಸುವ ಕುಕ್ಕರ್ನಿಂದ ತಲೆ ಮೇಲೆ ಹೊಡೆದಿದ್ದಲ್ಲದೇ ದೇಹದ ಹಲವು ಭಾಗಗಳಿಗೆ ಥಳಿಸಿದ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ವರದಿಯಾಗಿದೆ.
ಮನೆಯಲ್ಲಿ ಒಂದಷ್ಟು ಕೆಲಸಗಳಿವೆ, ಅದನ್ನು ಮಾಡು ಎಂದು ಮಗಳಿಗೆ ಹೇಳಿ ಹೋಗಿದ್ದ ತಾಯಿ, ಹಿಂತಿರುಗಿ ಮನೆಗೆ ವಾಪಾಸ್ ಬಂದಾಗ ಪುತ್ರಿಯ ಶವ ಕಂಡು ಭಾರೀ ಅಚ್ಚರಿಗೆ ಒಳಗಾಗಿದ್ದಾರೆ. ಮಗಳ ಸಾವಿಗೆ ಆಕೆಯ ತಂದೆಯೇ ಕಾರಣವಾದ ಸುದ್ದಿ ತಿಳಿದು, ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮನೆಗೆಲಸ ಮಾಡದೆ, ಸ್ಮಾರ್ಟ್ಫೋನ್ನಲ್ಲಿ ಗೇಮ್ ಆಡುತ್ತ ಕುಳಿತ್ತಿದ್ದ ಪುತ್ರಿಯನ್ನು ಕಂಡು ಕೆರಳಿದ ಪಾಪಿ ತಂದೆ, ಮಗಳ ತಲೆಯ ಮೇಲೆ ಏಕಾಏಕಿ ಕುಕ್ಕರ್ನಿಂದ ಬಲವಾಗಿ ಹೊಡೆದಿದ್ದಾನೆ. ಹೊಡೆದ ರಭಸಕ್ಕೆ ಪುತ್ರಿಯ ಪ್ರಾಣ ಹಾರಿಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾಳೆ.
ಮೃತ ಯುವತಿಯನ್ನು ಹೇತಾಲಿ (18) ಎಂದು ಗುರುತಿಸಲಾಗಿದ್ದು, ಆಟೋ ರಿಕ್ಷಾ ಚಾಲಕನಾಗಿದ್ದ ಆರೋಪಿ ತಂದೆ ಮುಖೇಶ್ (40) ಎಂಬಾತನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿಯ ತಾಯಿ ಗೀತಾ ಬೆನ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).