ಗ್ರಾಪಂ ಚುನಾವಣೆ: 13 ಸದಸ್ಯ ಸ್ಥಾನ ಹರಾಜು, 51 ಲಕ್ಷ ರೂಪಾಯಿಗೆ ಮಾರಾಟ

sindigeri grama panchayath
Published on

ಕುರುಗೋಡು (ಬಳ್ಳಾರಿ): ಮಂಡ್ಯದ ಕೆರಗೋಡು ಗ್ರಾಮ ಪಂಚಾಯಿತಿಯ ಗ್ರಾಮವೊಂದರ ಚುನಾವಣೆಯಲ್ಲಿ ತಹಸೀಲ್ದಾರ್​ವೊಬ್ಬರು ತನ್ನ ಪತ್ನಿಯನ್ನು ಅವಿರೋಧ ಆಯ್ಕೆ ಮಾಡಿದರೆ 25 ಲಕ್ಷ ರೂ. ನೀಡುವುದಾಗಿ ಹೇಳಿದ್ದಾರೆನ್ನುವ ವಿಷಯ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಇದರ ಜತೆಗೆ ಬಳ್ಳಾರಿಯ ಸಿಂದಿಗೇರಿ ಗ್ರಾಮ ಪಂಚಾಯಿತಿ ಹೆಸರೂ ಸದ್ದು ಮಾಡುತ್ತಿದೆ.

ಹೌದು, ಸಿಂದಿಗೇರಿ ಗ್ರಾಪಂ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಆಗಬಯಸುವವರು ಸದಸ್ಯ ಸ್ಥಾನವನ್ನು ಹರಾಜಿನ ಮೂಲಕ ಖರೀದಿಸಿದ್ದಾರೆ ಎಂಬ ಸುದ್ದಿ ರಾಜ್ಯಾದ್ಯಂತ ಹಬ್ಬಿದೆ. ಸೋಮವಾರ ವೈರಲ್​ ಆದ ವಿಡಿಯೋದಲ್ಲಿ ಈ ಅನುಮಾನ ಮೂಡುತ್ತದೆ.

ಸಿಂದಿಗೇರಿ ಗ್ರಾಪಂಗೆ ಒಳಪಡುವ ಬೈಲೂರು ಗ್ರಾಮದಲ್ಲಿ 13 ಸದಸ್ಯರ ಆಯ್ಕೆಗೆ ಅವಕಾಶವಿದೆ. ಅವಿರೋಧ ಆಯ್ಕೆಯಾಗ ಬಯಸುವವರು ಚುನಾವಣೆಯಲ್ಲಿ ವ್ಯಯಿಸುವ ಹಣವನ್ನು ಗ್ರಾಮದೇವತೆ ಮಾರಿಕಾಂಬ ದೇವಸ್ಥಾನದ ಅಭಿವೃದ್ಧಿಗೆ ನೀಡಬೇಕು. ಅದರಂತೆ 2 ಲಕ್ಷ ರೂ. ನಿಂದ 6 ಲಕ್ಷ ರೂ.ವರೆಗೂ ಸದಸ್ಯ ಸ್ಥಾನವನ್ನು ಹರಾಜು ಪ್ರಕ್ರಿಯೆ ಮೂಲಕ ಗ್ರಾಮಸ್ಥರ ಮುಖಂಡರನ್ನೊಳಗೊಂಡ ತಂಡವೇ ಸೇಲ್​ ಮಾಡಿದೆ.

ದೇವಸ್ಥಾನ ಅಭಿವೃದ್ಧಿಗೆ 13 ಸದಸ್ಯರು ತಂತಮ್ಮ ಶಕ್ತಿಯನುಸಾರ ಒಟ್ಟು 51.20 ಲಕ್ಷ ರೂ. ನೀಡಲು ಒಪ್ಪಿದ್ದಾರೆಂದು ಹೇಳಲಾಗಿದೆ. ಗ್ರಾಮದ ಅಭಿವೃದ್ಧಿಗೆ ಈ ನಿರ್ಣಯ ತೆಗೆದುಕೊಂಡಿದ್ದೇವೆಂದು ಗ್ರಾಮದ ಮುಖ್ಯಸ್ಥರು ಹೇಳುತ್ತಾರೆ.

ಸದಸ್ಯರ ಅವಿರೋಧ ಆಯ್ಕೆ ಮಾರಾಟ ಆಗಿದೆ ಎಂಬ ವಿಷಯ ತಿಳಿದಿದೆ. ಇದು ಕಾನೂನಾತ್ಮಕವಾಗಿ ಆಘಾತಕಾರಿ ಬೆಳವಣಿಗೆ. ಈ ಪ್ರಕರಣವನ್ನು ತನಿಖೆ ಮಾಡಿ, ತಪ್ಪೆಸಗಿದವರ ವಿರುದ್ಧ ಕ್ರಮ ಜರುಗಿಸಲಾಗುವುದು. ಇಂಥ ಘಟನೆ ನಡೆಯದಂತೆ ಜಾಗೃತಿ ಮೂಡಿಸುತ್ತೇವೆ ಎಂದು ಕುರುಗೋಡು ತಹಸೀಲ್ದಾರ್​ ಕೆ.ರಾಘವೇಂದ್ರ ರಾವು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net