

ಮಂಡ್ಯ: ಗ್ರಾಮ ಪಂಚಾಯಿತಿ ಚುನಾವಣೆ ರಂಗೇರಿದ್ದು, ಹಲವೆಡೆ ಅಭ್ಯರ್ಥಿಗಳ ಅವಿರೋಧ ಆಯ್ಕೆಗೆ ಕಸರತ್ತು ನಡೆದಿದೆ. ಇಂದಿನಿಂದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ ಆಗಿದ್ದು, ಅಭ್ಯರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಸಕ್ಕರೆ ನಾಡು ಮಂಡ್ಯದಲ್ಲಿ ಲೋಕಲ್ ವಾರ್ನ ಅಬ್ಬರ ತುಸು ಜೋರಾಗಿಯೇ ಇದ್ದು, ತಹಸೀಲ್ದಾರೊಬ್ಬರು ತನ್ನ ಪತ್ನಿಯನ್ನು ಅವಿರೋಧ ಆಯ್ಕೆ ಮಾಡುವುದಕ್ಕಾಗಿ ಬರೋಬ್ಬರಿ 25 ಲಕ್ಷ ರೂಪಾಯಿ ಆಫರ್ ಕೊಟ್ಟಿದ್ದಾರೆ!
ಮಂಡ್ಯ ತಾಲೂಕಿನ ಕೆರಗೋಡು ಗ್ರಾ.ಪಂ ವ್ಯಾಪ್ತಿಯ ಪಂಚಲಿಂಗನದೊಡ್ಡಿ ಗ್ರಾಮದ ಮುಖಂಡರ ಸಮ್ಮುಖದಲ್ಲಿ 25 ಲಕ್ಷ ರೂಪಾಯಿ ನೀಡುವುದಾಗಿ ತಹಸೀಲ್ದಾರ್ ಹೇಳಿದ್ದಾರೆ. ತನ್ನ ಪತ್ನಿಯನ್ನು ಗ್ರಾಪಂ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಿದ್ರೆ ಊರಿನ ಅಭಿವೃದ್ಧಿ, ದೇವಸ್ಥಾನ ನಿರ್ಮಾಣಕ್ಕೆ 25 ಲಕ್ಷ ರೂ. ನೀಡಲು ಒಪ್ಪಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಗ್ರಾಮಕ್ಕೆ ಪೊಲೀಸರು ದೌಡಾಯಿಸಿದ್ದಾರೆ.
ತಹಸೀಲ್ದಾರ್ಗೆ ಪತ್ನಿಯನ್ನು ಚುನಾವಣೆಗೆ ನಿಲ್ಲಿಸುವ ಮನಸ್ಸಿರಲಿಲ್ಲ. ಗ್ರಾಮದ ಅಭಿವೃದ್ಧಿಗಾಗಿ ಮುಖಂಡರೆಲ್ಲ ಸೇರಿ ತಮ್ಮ ಮನೆಯವರನ್ನೇ ಚುನಾವಣೆಗೆ ನಿಲ್ಲುವಂತೆ ಮನವಿ ಮಾಡಿದ್ದೆವು. ಈ ವೇಳೆ ಗ್ರಾಮದ ಅಭಿವೃದ್ಧಿ, ದೇವಸ್ಥಾನ ನಿರ್ಮಾಣಕ್ಕೆ ಸಹಾಯ ಮಾಡುವ ಜತೆಗೆ ಒಂದೂವರೆ ಗುಂಟೆ ಜಾಗ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಊರಿಗೆ ಭೇಟಿ ನೀಡಿದ ಮಾಧ್ಯಮದವರಿಗೆ ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)