

Silver Rate: ಒಂದೆಡೆ ಚಿನ್ನದ ಬೆಲೆ 1 ಲಕ್ಷ ರೂ.ಗೆ ತಲುಪಲು ಕೆಲವೇ ಕೆಲವು ಹೆಜ್ಜೆಗಳ ಹಿಂದಿದ್ದರೆ, ಮತ್ತೊಂದೆಡೆ ಬೆಳ್ಳಿಯ ಬೆಲೆ ಕೂಡ ಗಗನಕ್ಕೇರುವ ಎಲ್ಲ ಲಕ್ಷಣಗಳು ಕಂಡುಬಂದಿವೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಮತ್ತೆ 1 ಲಕ್ಷ ರೂ.ನತ್ತ ಮುಖಮಾಡಿವೆ. ಮುಂದಿನ ಐದರಿಂದ ಆರು ತಿಂಗಳಲ್ಲಿ ಚಿನ್ನದ ಬೆಲೆ ಹೊಸ ದಾಖಲೆಗಳನ್ನು ನಿರ್ಮಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ನ್ಯೂಜಿಲೆಂಡ್ ಸಂಸತ್ತಿನಲ್ಲಿ ಡೀಪ್ಫೇಕ್ ಸದ್ದು
ಆದಾಗ್ಯೂ, ಬೆಳ್ಳಿ ಕೂಡ ಚಿನ್ನದ ಹಾದಿಯನ್ನೇ ಹಿಡಿದಿರುವುದು ಇದೀಗ ಗ್ರಾಹಕರಲ್ಲಿ ದೊಡ್ಡ ತಲೆನೋವನ್ನು ಉಂಟುಮಾಡಿದೆ. ಕಳೆದ ಕೆಲವು ದಿನಗಳಿಂದ ಬೆಳ್ಳಿಯ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿದೆ. ಹೀಗಾಗಿ, ಸಿಲ್ವರ್ ಕೂಡ ಹೊಸ ದಾಖಲೆಗಳನ್ನು ನಿರ್ಮಿಸುವತ್ತ ದಾಪುಗಾಲಿಟ್ಟಿದೆ. ಶುಕ್ರವಾರ (ಜೂ.06) ಬೆಳಗ್ಗೆ ದಾಖಲಾದ ವಿವರ ಪ್ರಕಾರ, ಭಾರತದಲ್ಲಿ ಬೆಳ್ಳಿಯ ಬೆಲೆ ಹೊಸ ದಾಖಲೆಗಳನ್ನು ಬರೆದಿದೆ. ಪ್ರತಿ ಕೆಜಿ ಬೆಳ್ಳಿಯ ಬೆಲೆ 3 ಸಾವಿರ ರೂ.ನಷ್ಟು ಏರಿಕೆಯಾಗಿ ಇದೀಗ 1,17,000 ರೂ.ಗೆ ಬಂದು ನಿಂತಿದೆ. ಇದು ಗ್ರಾಹಕರನ್ನು ಅಕ್ಷರಶಃ ಚಿಂತೆಗೆ ದೂಡಿದೆ.
ಕಳೆದ ಐದು ದಿನಗಳಲ್ಲಿ, ಪ್ರತಿ ಕೆಜಿ ಬೆಳ್ಳಿಯ ಬೆಲೆ 6,100 ರೂ.ಗಳಷ್ಟು ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಕೆಜಿ ಬೆಳ್ಳಿಯ ಬೆಲೆ 1,000 ರೂ.ಗಳಿಗೆ ತಲುಪಿದ್ದು, 1,07,000 ರೂ. ಆಗಿದೆ. ಬೆಲೆಯಲ್ಲಿ ದುಪ್ಪಟ್ಟು ಏರಿಕೆಗೆ ಹಲವಾರು ಪ್ರಮುಖ ಕಾರಣಗಳಿವೆ. ಬಲವಾದ ಮೂಲಭೂತ ಅಂಶಗಳು, ಕೈಗಾರಿಕೆಗಳಿಂದ ಬೇಡಿಕೆ, ಹಣದುಬ್ಬರವನ್ನು ನಿಯಂತ್ರಿಸುವ ಸಾಧನವಾಗಿ ಬಳಕೆ ಮತ್ತು ಅಂತರರಾಷ್ಟ್ರೀಯ ಪೂರೈಕೆಯಲ್ಲಿ ಮಂದಗತಿಯಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ದರವು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಬೆಳ್ಳಿಯ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಪ್ರಸ್ತುತ ಒಂದು ಕೆಜಿ ಬೆಳ್ಳಿ 1,07,000 ರೂ. ಇದೆ. ಇದು ದೀಪಾವಳಿ ಹಬ್ಬದ ವೇಳೆಗೆ 1,20,000 ರೂ. ಆಗುವ ಎಲ್ಲ ಸಾಧ್ಯತೆಯಿದೆ ಎಂದು ಮೆಹ್ತಾ ಈಕ್ವಿಟೀಸ್ ಉಪಾಧ್ಯಕ್ಷ ರಾಹುಲ್ ಕಲಾಂತ್ರಿ ಹೇಳಿದ್ದಾರೆ. ಆದಾಗ್ಯೂ, ಅಂತಾರಾಷ್ಟ್ರೀಯ ಅನಿಶ್ಚಿತತೆಗಳಿಂದಾಗಿ, ಈ ಮಧ್ಯೆ ತೀವ್ರ ಏರಿಳಿತಗಳನ್ನು ಅನುಭವಿಸಬಹುದು ಎಂದೂ ತಿಳಿಸಿದ್ದಾರೆ,(ಏಜೆನ್ಸೀಸ್).