ನ್ಯೂಜಿಲೆಂಡ್ ಸಂಸತ್ತಿನಲ್ಲಿ ಡೀಪ್​ಫೇಕ್ ಸದ್ದು

8-6841dee0db4c3
Published on

ವೆಲ್ಲಿಂಗ್ಟನ್: ಕೃತಕ ಬುದ್ಧಿಮತ್ತೆ ಈಗ ಜಗತ್ತಿನಾದ್ಯಂತ ಚರ್ಚೆಯಲ್ಲಿರುವ ಪ್ರಮುಖ ತಂತ್ರಜ್ಞಾನ. ಈ ತಂತ್ರಜ್ಞಾನದ ಉಪಯೋಗದ ಜತೆಯಲ್ಲೇ ದುರ್ಬಳಕೆಯ ಕುರಿತೂ ಚರ್ಚೆಗಳು ನಡೆಯುತ್ತಿವೆ. ಇದೇ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್​ನ ಸಂಸದೆ ಲಾರಾ ಮೆಕ್​ಕ್ಲೂರ್ ಡೀಪ್​ಫೇಕ್ ತಂತ್ರಜ್ಞಾನದ ಅಪಾಯಗಳ ಕುರಿತು ಸಂಸತ್ತಿನ ಗಮನಸೆಳೆದಿದ್ದಾರೆ.

ಲಾರಾ ಮೆಕ್​ಕ್ಲೂರ್ ಮೇ 12 ರಂದು ನ್ಯೂಜಿಲೆಂಡ್ ಸಂಸತ್ತಿನಲ್ಲಿ ಡೀಪ್​ಫೇಕ್ ಡಿಜಿಟಲ್ ಹಾನಿ ಮತ್ತು ಶೋಷಣೆ ಮಸೂದೆ ಯನ್ನು ಮಂಡಿಸಿದ್ದರು. ಈ ಮಸೂದೆ ಡಿಜಿಟಲ್ ತಂತ್ರಜ್ಞಾನದಿಂದ ತಿರುಚಿದ ಅಥವಾ ಎಡಿಟ್ ಮಾಡಿದ ಫೋಟೋ ಮತ್ತು ವಿಡಿಯೋಗಳನ್ನೂ ಅಪರಾಧ ಕಾಯ್ದೆಯಡಿ ತರಲು ತಿದ್ದುಪಡಿಯನ್ನು ಕೋರಿತ್ತು. ಈ ಮಸೂದೆ ಮೇಲಿನ ಚರ್ಚೆಯ ವೇಳೆ ಮೇ 14 ರಂದು ಲಾರಾ ಮೆಕ್​ಕ್ಲೂರ್ ಡೀಪ್​ಫೇಕ್ ಮೂಲಕ ಎಡಿಟ್ ಮಾಡಿದ ತಮ್ಮದೇ ನಗ್ನಚಿತ್ರವನ್ನು ಸಂಸತ್ತಿನಲ್ಲಿ ಪ್ರದರ್ಶಿಸಿದ್ದರು. ಜತೆಗೆ ಕೇವಲ 5 ನಿಮಿಷದಲ್ಲಿ ಇಂತಹ ಚಿತ್ರಗಳನ್ನು ಡೀಪ್​ಫೇಕ್ ಬಳಸಿ ಹೇಗೆ ಎಡಿಟ್ ಮಾಡಲು ಸಾಧ್ಯವಿದೆ ಎಂಬುದನ್ನೂ ತೋರಿಸಿದ್ದರು. ತಂತ್ರಜ್ಞಾನದಲ್ಲಿ ತಪು್ಪಗಳಿಲ್ಲ, ಆದರೆ

ಅದನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಜನರಿಗೆ ಕಿರುಕುಳ ನೀಡುವವರಿದ್ದಾರೆ. ಈ ಹಿನ್ನೆಲೆಯಲ್ಲಿ ಒಪ್ಪಿಗೆ ಇಲ್ಲದೆ ಡೀಪ್​ಫೇಕ್ ಸೇರಿದಂತೆ ಯಾವುದೇ ನಗ್ನ ಚಿತ್ರ ಶೇರ್ ಮಾಡುವುದು ಕಾನೂನು ಬಾಹಿರ ಎಂದು ಕಾನೂನಿಗೆ ತಿದ್ದುಪಡಿ ತರ ಬೇಕೆಂದು ಕೋರಿದರು.

ಮೂವರು ಸಂಸದರು ಅಮಾನತು

ನ್ಯೂಜಿಲೆಂಡ್ ಸಂಸತ್ತಿನಲ್ಲಿ ಹಾಕಾ ನೃತ್ಯ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದ್ದ ಮಾವೋರಿ ಪಕ್ಷದ ಮೂವರು ಸಂಸದರನ್ನು ಸಂಸತ್ತಿನಿಂದ ಅಮಾನತು ಮಾಡಲಾಗಿದೆ. ಗುರುವಾರ ಸಂಸದರನ್ನು ಅಮಾನತು ಮಾಡುವ ಸಂಬಂಧ ನಡೆದ ಮತದಾನ ಪ್ರಕ್ರಿಯೆಯಲ್ಲಿ ಹಾಕಾ ನೃತ್ಯದ ಪ್ರತಿಭಟನೆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಕಿರಿಯ ಸಂಸದೆ ಹನಾ ರೌಹಿತಿ ಮೈಪಿ ಕ್ಲಾರ್ಕ್ ರನ್ನು 7 ದಿನ ಅಮಾನತು ಮಾಡಲಾಗಿದ್ದರೆ, ಮಾವೋರಿ ಪಕ್ಷದ ನಾಯಕರಾದ ಡೆಬ್ಬಿ ನ್ಗರೆವಾ ಪ್ಯಾಕರ್ ಮತ್ತು ರವಿರಿ ವೈಟಿಟಿ ಅವರನ್ನು 21 ದಿನಗಳ ಕಾಲ ಅಮಾನತು ಮಾಡಲಾಗಿದೆ. ಇದು ನ್ಯೂಜಿಲೆಂಡ್ ಸಂಸತ್ತಿನಲ್ಲಿ ಸಂಸದರಿಗೆ ವಿಧಿಸಿದ ದೀರ್ಘ ಅಮಾನತು ಶಿಕ್ಷೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net