ಬೆಳ್ಳಿ ದರ ಮತ್ತೆ ದಾಖಲೆ ಏರಿಕೆ

untitled-design-5-684330e2aa362
Published on

ನವದೆಹಲಿ: ಸ್ಥಳೀಯ ಆಭರಣ ತಯಾರಕರು ಮತ್ತು ದಾಸ್ತಾನುದಾರರು ಖರೀದಿ ಭರಾಟೆ ಹೆಚ್ಚಿಸಿದ ಪರಿಣಾಮವಾಗಿ ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಬೆಳ್ಳಿಯ ಬೆಲೆ 3 ಸಾವಿರ ರೂ.ನಷ್ಟು ಏರಿಕೆಯಾಗಿ ಕೆಜಿಗೆ 1,07,100 ರೂ.ಗಳ ಹೊಸ ದಾಖಲೆ ಬರೆದಿದೆ.

ಬೆಳ್ಳಿ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದು ಇದು ಸತತ ಎರಡನೇ ದಿನ. ಗುರುವಾರವೂ ಅದು 2 ಸಾವಿರ ರೂ.ನಷ್ಟು ಏರಿಕೆಯಾಗಿ ಕೆಜಿಗೆ 1,04,100 ರೂ.ಗೆ ತಲುಪಿತ್ತು. ಕಳೆದ ವರ್ಷದ ಡಿಸೆಂಬರ್ 31ರಿಂದ ಇಲ್ಲಿಯವರೆಗೆ ಬೆಳ್ಳಿ ದರ 17,400 ರೂ. ಏರಿದ್ದು, ಶೇ. 19.4ರಷ್ಟು ವೃದ್ಧಿ ದಾಖಲಿಸಿದೆ. ಇದೇ ವೇಳೆ, ಶೇ. 99.9, ಶೇ. 99.5ರಷ್ಟು ಶುದ್ಧತೆಯ ಚಿನ್ನವು ಶುಕ್ರವಾರ 10 ಗ್ರಾಂಗೆ ಕ್ರಮವಾಗಿ 99,690 ರೂ. ಮತ್ತು 99,100 ರೂ.ಗೆ ಮಾರಾಟವಾಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.

ಸೆನ್ಸೆಕ್ಸ್ 700 ಅಂಕ ಹೆಚ್ಚಳ

ಮುಂಬೈ: ಆರ್​ಬಿಐ ರೆಪೋ ದರ ಕಡಿತ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಶುಕ್ರವಾರ ಶೇ. 1ರಷ್ಟು ಏರಿಕೆ ದಾಖಲಿಸಿದೆ. ದಿನದ ವಹಿವಾಟಿನ ಮಧ್ಯೆ 857 ಅಂಕ ಏರಿಕೆಯಾಗಿ 82,299ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 746 ಅಂಕ ಏರಿಕೆ ದಾಖಲಿಸಿ 82,188ಕ್ಕೆ ಸ್ಥಿರವಾಯಿತು. ನಿಫ್ಟಿ 252 ಅಂಕ ಏರಿಕೆ ಕಂಡು 25,003ಕ್ಕೆ ಸ್ಥಿರಗೊಂಡಿತು. ಎಲ್ಲ ವಲಯಗಳ ಷೇರುಗಳಿಗೂ ಬೇಡಿಕೆ ಕುದುರಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net