

ನವದೆಹಲಿ: ಆರಂಭಿಕ ಹಂತದ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿರುವ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಕರೊನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ (ಮಾನವರ ಮೇಲೆ ಪ್ರಯೋಗ) ಭಾರತದಲ್ಲೂ ಆರಂಭವಾಗಲಿದೆ.
ಇದಕ್ಕಾಗಿ ಪುಣೆಯ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತೀಯ ಔಷಧ ಮಹಾನಿಯಂತ್ರಕರ (ಡಿಜಿಸಿಐ) ಒಪ್ಪಿಗೆ ಪಡೆಯಲಿದೆ.ಜತೆಗೆ ಉತ್ಪಾದನೆಯನ್ನೂ ಆರಂಭಿಸಲಿದೆ. ಏಕೆಂದರೆ ಸಿರಂ ಇನ್ಸ್ಟಿಟ್ಯೂಟ್ ಈಗಾಗಲೇ ಸಂಸ್ಥೆಯು ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಬ್ರಿಟನ್ನಿನ ಆಸ್ಟ್ರಾಜೆನೆಕಾ ಕಂಪನಿಯೊಂದಿಗೆ ಉತ್ಪಾದನೆ ಒಪ್ಪಂದ ಮಾಡಿಕೊಂಡಿದೆ.
ಇನ್ನೊಂದು ವಾರದಲ್ಲಿ ಡಿಜಿಸಿಎ ಪರವಾನಗಿ ಪಡೆದುಕೊಳ್ಳಲಾಗುತ್ತದೆ. ಇದಾಗುತ್ತಿದ್ದಂತೆ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ನಿರ್ವಹಣಾಧಿಕಾರಿ ಆದಾರ್ ಪೂನಾವಾಲಾ ಹೇಳಿದ್ದಾರೆ.
ಆಕ್ಸ್ಫರ್ಡ್ ಲಸಿಕೆ ಕರೊನಾ ರೋಗಿಗಳಲ್ಲಿ ಪ್ರತಿರೋಧಕ ಶಕ್ತಿ ಸೃಷ್ಟಿಸುತ್ತಿದೆ ಹಾಗೂ ಇದು ಮಾನವರ ಬಳಕೆಗೆ ಸುರಕ್ಷಿತವಾಗಿದೆ ಎಂದು ಫಲಿತಾಂಶದಲ್ಲಿ ಗೊತ್ತಾಗಿದೆ. ಸಾವಿರಾರು ಜನರನ್ನು ಒಳಗೊಂಡ ಇದರ ಮೂರನೇ ಹಂತದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಭಾರತಕ್ಕೇನು ಲಾಭ: ಆಸ್ಟ್ರಾ ಜೆನೆಕಾ ಕಂಪನಿಯೊಂದಿಗೆ ಸಿರಂ ಇನ್ಸ್ಟಿಟ್ಯೂಟ್ ಲಸಿಕೆ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದೆ. ಇದರಂತೆ ವರ್ಷದ ಕೊನೆವರೆಗೆ ಆರು ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡಲಾಗುತ್ತದೆ. ಮುಂದಿನ ಒಂದು ವರ್ಷದಲ್ಲಿ ಇದರ ಪ್ರಮಾಣ 100 ಕೋಟಿ ಡೋಸ್ ಉತ್ಪಾದನೆ ಗುರಿ ಹೊಂದಲಾಗಿದೆ.
ಒಪ್ಪಂದದನ್ವಯ ಆರು ಕೋಟಿ ಡೋಸ್ನಲ್ಲಿ ಕನಿಷ್ಠ 20-30 ಲಕ್ಷ ಡೋಸ್ ಭಾರತದ ಬಳಕೆಗೆ ಸಿಗಲಿದೆ. ಹೀಗಾಗಿ ಆಕ್ಸ್ಫರ್ಡ್ ಲಸಿಕೆ ಯಶಸ್ವಿಯಾದಲ್ಲಿ ಬ್ರಿಟನ್ ಜತೆಗೆ ಭಾರತಕ್ಕೂ ಲಸಿಕೆ ಏಕಕಾಲದಲ್ಲಿ ಅಲಬ್ಯವಾಗಲಿದೆ.
ಇದಲ್ಲದೇ ಜಾಗತಿಕವಾಗಿ ಲಸಿಕೆ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಇತರ ನಾಲ್ಕು ಕಂಪನಿಗಳು ಕೂಡ ಭಾರತದ ವಿವಿಧ ಔಷಧ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಇದಲ್ಲದೇ, ದೇಶೀಯ ಕಂಪನಿ ಭಾರತ್ ಬಯೋಟೆಕ್, ಜೈಡಸ್ ಕ್ಯಾಡಿಲ್ಲಾ ಸೇರಿ ಭಾರತದಲ್ಲಿಯೇ ಏಳು ಕಂಪನಿಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ.