ಅಧ್ಯಾತ್ಮ ಲೋಕದ ಅರ್ನ್ಯಘ ರತ್ನ ಲಿಂ. ಸಿದ್ಧಲಿಂಗ ಶ್ರೀಗಳು

Siddalinga Shree
Published on

| ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ಬಾಳೆಹೊನ್ನೂರು

Rambhapuri
ಸದ್ದುಗದ್ದಲವಿಲ್ಲದ ಸಿದ್ಧಿ ಸಾಧನೆಗೈದ ಸಿದ್ಧಿ ಪುರುಷ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು. ಜಗವನುದ್ಧರಿಸಲು ಅವತರಿಸಿ ಬಂದ ಯುಗ ಪುರುಷರು ಇವರು. ಕಿರಿ ವಯಸ್ಸಿನಲ್ಲಿ ಹಿರಿದಾದ ಜವಾಬ್ದಾರಿ ಹೊತ್ತು ಸದ್ಧರ್ಮ ಪೀಠ ಬೆಳಗಿದ ಭಗೀರಥ. ಜ್ಞಾನ ಧ್ಯಾನ ತಪಸ್ಸುಗಳ ಮೂಲಕ ಭಕ್ತ ಸಂಕುಲದ ಬಾಳಿಗೆ ಬೆಳಕು ತೋರಿದ ದಿವ್ಯ ಚೇತನ. ಜಗಳೂರು ತಾಲೂಕಿನ ಬಂಗಾರಕ್ಕನಹಳ್ಳಿಯ ಶ್ರೀ ಚನ್ನಬಸವಾರ್ಯ- ಗುರುಸಿದ್ಧಮಾಂಬೆಯರ ಒಡಲ ಕುಡಿಯಾಗಿ ಧರ್ಮಸೂರ್ಯನಾದವರು ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು. ವೀರಶೈವ ಧರ್ಮ ಸಂಸ್ಕೃತಿ ಪರಂಪರೆಗೆ ಮತ್ತು ಗುರು ಪೀಠಗಳ ಪುನಶ್ಚೇತನಕ್ಕೆ ಜೀವನ ಮುಡಿಪಾಗಿಟ್ಟ ಶ್ರೇಷ್ಠ ಸಾಧಕರು. ಶಿವಾದ್ವೈತ ಸಿದ್ಧಾಂತದ ಅರಿವು ಆದರ್ಶಗಳನ್ನು ಜನಮನಕ್ಕೆ ತಲುಪಿಸಿದ ಮಹಾನುಭಾವ. ಅಂಗ ಅವಗುಣ ತೊಲಗಿಸಿ ಲಿಂಗ ಗುಣ ಬೆಳೆದು ಬಲಗೊಳ್ಳಲು ಸದಾ ಶ್ರಮಿಸಿದ ಧರ್ಮರತ್ನರಿವರು.

ನೊಂದವರ ಬೆಂದವರ ಬಾಳಿಗೆ ಶಿವಯೋಗ ಶಕ್ತಿ ಸಾಧನೆಯ ಮೂಲಕ ಬದುಕಿಗೆ ಶ್ರೇಯಸ್ಸು ತಂದಿತ್ತ ಪರಮಾಚಾರ್ಯರು. ಬಡತನ ತೊಲಗಿ ಸಿರಿತನ ಬೆಳೆಸಲು ಗುಣಾತ್ಮಕ ಮತ್ತು ರಚನಾತ್ಮಕ ಕಾರ್ಯಗಳ ಮೂಲಕ ಜೀವ ತುಂಬಿದ ದೂರದೃಷ್ಟಿಯ ಚಿಂತಕರು. ವಿಶ್ವ ಧರ್ಮದ ವಿಭು ಶ್ರೀ ಜಗದ್ಗುರು ರೇಣುಕಾಚಾರ್ಯರು ರೂಪಿಸಿದ ತತ್ವ ಸಿದ್ಧಾಂತಗಳನ್ನು ಪರಿಪಾಲಿಸಿಕೊಂಡು ಬಂದ ಧರ್ಮದ ಕಣ್ಮಣಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು. ವೀರಶೈವ ಧರ್ಮ ಸಂಸ್ಕೃತಿಯ ಜತೆಜತೆಗೆ ಶೈಕ್ಷಣಿಕ ಸತ್ಕ್ರಾಂತಿಗೆ ಬೀಜ ಬಿತ್ತಿದ ಆಚಾರ್ಯವರೇಣ್ಯರು. ಸರಳತೆಗೆ ಸಾತ್ವಿಕತೆಗೆ ಹೆಸರಾಗಿ ಉಸಿರಾಗಿ ಜೀವ ತುಂಬಿದ ಪರಮ ತಪಸ್ವಿ ಲಿಂ. ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು.

‘ಪಂಚಾಚಾರ್ಯ ಪ್ರಭಾ’ ವಾರಪತ್ರಿಕೆಯ ಮೂಲಕ ನಿಜ ತತ್ವದ ಅರಿವು ಮೂಡಿಸಲು ಗುರುಸ್ಥಲದ ಹಿರಿಮೆ ಬೆಳೆಸಲು ಸದಾ ಶ್ರಮಿಸಿ ಧರ್ಮ ಧ್ವಜವನ್ನು ಬಾನೆತ್ತರಕ್ಕೆ ಹಾರಿಸಿದ ದಿವ್ಯ ಚೇತನ. ಅವರು ಅಗಲಿ 88 ಸಂವತ್ಸರಗಳು ಸಂದರೂ ಅವರ ನೆನಹು ನಮ್ಮೆಲ್ಲರ ಬಾಳಿಗೆ ಸದಾ ಹಸಿರು ಹಸಿರು. ಅಜ್ಞಾನದ ಕವಲು ದಾರಿಯಲ್ಲಿ ಮುಗ್ಗರಿಸುತ್ತಿರುವ ಜನ ಸಮುದಾಯಕ್ಕೆ ಅವರು ತೋರಿದ ದಾರಿ ಮಾಡಿದ ತಪಸ್ಸು ಸರ್ವರನ್ನು ಸನ್ಮಾರ್ಗದ ಕಡೆಗೆ ಕರೆ ತರಲೆಂದು ಸದಾ ಸ್ಮರಿಸಿ ಶ್ರದ್ಧಾ ಭಕ್ತಿಪೂರ್ವಕ ಕೋಟಿ ಕೋಟಿ ಪ್ರಣಾಮಗಳನ್ನು ಸಮರ್ಪಿಸುತ್ತೇವೆ. ಅವರು ತಪಸ್ಸುಗೈದ ಬುಕ್ಕಾಂಬುಧಿ ಕ್ಷೇತ್ರದಲ್ಲಿ ಮತ್ತು ಶ್ರೀ ಜಗದ್ಗುರು ಉಜ್ಜಯನಿ ಸದ್ಧರ್ಮ ಪೀಠದಲ್ಲಿ ಜ. 29ರಂದು ವಿಧ್ಯುಕ್ತವಾಗಿ ಪುಣ್ಯ ಸ್ಮರಣೋತ್ಸವ ಜರುಗುತ್ತದೆ. ಸರ್ವರೂ ಪಾಲ್ಗೊಂಡು ಪುನೀತರಾಗಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net