

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದ ನಂತರ ಸಿದ್ದರಾಮಯ್ಯ ರಾಜೀನಾಮೆಗೆ ಪ್ರತಿಪಕ್ಷ ಬಿಜೆಪಿ ನಾಯಕರು ಬಿಗಿಪಟ್ಟು ಹಿಡಿದಿದ್ದಾರೆ. ಇದನ್ನು ಮುಡಾ ನಿವೇಶನಗಳ ಅಕ್ರಮ ಹಂಚಿಕೆ ವಿರುದ್ಧ ನಡೆಸಿದ್ದ ಮೈಸೂರು ಚಲೋ ಪಾದಯಾತ್ರೆಗೆ ಸಿಕ್ಕ ಮೊದಲ ಜಯವೆಂದು ವ್ಯಾಖ್ಯಾನಿಸಲಾಗಿದೆ. ಭ್ರಷ್ಟಾಚಾರಮುಕ್ತ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ವಾಗ್ದಾಳಿ ಮಾಡಿದೆ. ಭ್ರಷ್ಟ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾ ಮೆರವಣಿಗೆ, ಧರಣಿ ನಡೆಸಿದೆ. ಪಕ್ಷದ ರಾಜ್ಯ ಕಚೇರಿ, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ, ಕೊಪ್ಪಳ ಸೇರಿ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಸಿಎಂ ನಿವಾಸಕ್ಕೆ ಮುತ್ತಿಗೆ ಎಚ್ಚರಿಕೆ: ಮುಡಾದಲ್ಲಿ ಅಕ್ರಮವೇ ಆಗಿಲ್ಲ, ತನಿಖೆಯ ಅಗತ್ಯವೇ ಇಲ್ಲವೆಂದು ಸಿಎಂ ವಾದಿಸಿದ್ದರು. ಹೈಕೋರ್ಟ್ ತೀರ್ಪಿನ ಬಳಿಕ ರಾಜೀನಾಮೆ ನೀಡುವುದಿಲ್ಲವೆಂಬ ಹಠಕ್ಕೆ ಬಿದ್ದಿದ್ದಾರೆ. ಸಿಎಂ ಕುಟುಂಬವೇ ಫಲಾನುಭವಿಯಾಗಿದೆ, ತನಿಖೆ ಅಗತ್ಯವಿದೆ ಎಂದು ಹೈಕೋರ್ಟ್ ಹೇಳಿದ್ದು, ನಿಷ್ಪಕ್ಷಪಾತ ಮತ್ತು ತ್ವರಿತ ತನಿಖೆಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ದೋಷಮುಕ್ತರಾಗಿ ಮತ್ತೆ ಸಿಎಂ ಆಗುವುದಕ್ಕೆ ಅಡ್ಡಿಯೇನಿಲ್ಲ ಎಂದು ಆಗ್ರಹಿಸಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡದಿದ್ದರೆ ನೈತಿಕತೆ ಅಲ್ಲದಿದ್ದರೂ ನ್ಯಾಯಸಮ್ಮತ ತನಿಖೆ, ರಾಜ್ಯದ ಗೌರವ ಉಳಿಸಲು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಪ್ರತಿಭಟನಾನಿರತ ಬಿಜೆಪಿ ನಾಯಕರು ಎಚ್ಚರಿಸಿದರು.
ಹೈಕೋರ್ಟ್ ತೀರ್ಪು ಪ್ರಕಟವಾಗುವ ಮುನ್ನ ಪಕ್ಷದ ರಾಜ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸಹ ಉಸ್ತುವಾರಿ ಸುಧಾಕರರೆಡ್ಡಿ, ಸಿ.ಟಿ.ರವಿ, ಲೆಹರ್ಸಿಂಗ್ ಸಿರೋಯ, ನಂದೀಶ್ರೆಡ್ಡಿ ಮತ್ತಿತರರು ಔಪಚಾರಿಕ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಬಿಜೆಪಿ ನಿರಂತರ ಹೋರಾಟ, ಜಂಟಿ ಪಾದಯಾತ್ರೆಗೆ ಜಯ ಸಿಕ್ಕಿದೆ. ವಿವೇಚನಾ ಅಧಿಕಾರ ಬಳಸಿ ತನಿಖೆಗೆ ಆದೇಶಿಸಿದ ರಾಜ್ಯಪಾಲರಿಗೆ ಕಾಂಗ್ರೆಸ್ ನಾಯಕರು ಅಪಮಾನಿಸಿದರು ಎಂದು ಟೀಕಿಸಿದರು. ನಂತರ ಡಾಲರ್ಸ್ ಕಾಲನಿಯ ಧವಳಗಿರಿ ನಿವಾಸಕ್ಕೆ ತೆರಳಿದ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದರು.
* ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪು ಮೊದಲ ಹಂತವೆಂಬ ನಿಲುವು
* ಭ್ರಷ್ಟ ಕಾಂಗ್ರೆಸ್ ಸರ್ಕಾರವೆಂದು ಬಿಂಬಿಸಲು ಜಿಲ್ಲಾಮಟ್ಟದಲ್ಲಿ ಹೋರಾಟ
* ಮುಂದಿನ ಹಂತದ ಕಾರ್ಯತಂತ್ರಗಳಿಗೆ ಇನ್ನಷ್ಟು ಕಾದು ನೋಡುವ ತಂತ್ರ
* ಹೋರಾಟದ ಯಶಸ್ಸಿನ ಲಾಭ ಪಡೆದು ನಾಯಕರ ಮುನಿಸು ಶಮನ ಯತ್ನ
* ಪಕ್ಷದ ಹಿರಿಯ ನಾಯಕರು, ರಾಜ್ಯ ಕೋರ್ ಸಭೆ ನಡೆಸಿ ಸಮಾಲೋಚನೆ
* ಸಂಘ-ಪರಿವಾರದ ಪ್ರಮುಖರ ಜತೆಗೆ ರ್ಚಚಿಸಿ ಸಲಹೆ ಪಡೆಯುವ ಚಿಂತನೆ
* ಮುಡಾ ಪ್ರಕರಣ ಹರಿಯಾಣ, ಮಹಾರಾಷ್ಟ್ರ ಚುನಾವಣೆಗೂ ಬಳಕೆ ಸಾಧ್ಯತೆ
* ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಮತ್ತೊಂದು ಸುತ್ತಿನ ಆಂದೋಲನ
*ಉಪ ಚುನಾವಣೆ ಘೋಷಣೆಗೆ ಮುನ್ನ ಸಂಘಟನೆಗೆ ಬಲ ತುಂಬುವ ಕಸರತ್ತು