ಈ ಬಾರಿ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸ್ತೇನೆ: ಸಿದ್ದರಾಮಯ್ಯ

Siddaramaiah
Published on

ಕೋಲಾರ: ''ನಿಮ್ಮ ಪ್ರೀತಿ, ಅಭಿಮಾನವನ್ನು ತಿರಸ್ಕಾರ ಮಾಡಲು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ಇಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ" ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಸಾಕಷ್ಟು ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಮತ್ತೆ ಬಾದಾಮಿಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆ ಎದುರಾದಾಗೆಲ್ಲಾ, ಇನ್ನೂ ಅಂತಿಮವಾಗಿಲ್ಲ. ಹಲವು ಕ್ಷೇತ್ರಗಳಿಂದ ಆಹ್ವಾನ ಬಂದಿದೆ. ಕೋಲಾರ, ಬಾದಾಮಿ, ವರುಣಾ ಮೂರು ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವಂತೆ ಒತ್ತಡ ಇದೆ ಎಂಬ ಉತ್ತರವನ್ನೇ ನೀಡುತ್ತಾ ಬಂದಿದ್ದರು.

ಇದೀಗ ಕೋಲಾರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೋಲಾರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಆದರೆ ಕ್ಷೇತ್ರದ ಬಗ್ಗೆ ಅಂತಿಮ ತೀರ್ಮಾನವನ್ನು ಹೈಕಮಾಂಡ್ ಮಾಡುತ್ತದೆ. ಪಕ್ಷದಲ್ಲಿ ಶಿಸ್ತು ಇರಬೇಕು. ಹೀಗಾಗಿ ಸ್ಪರ್ಧೆ ಮಾಡುವ ಬಗ್ಗೆ ಹೈಕಮಾಂಡ್ ಒಪ್ಪಿಗೆಯೂ ಅಗತ್ಯ ಎಂದು ಹೇಳಿದರು.

ಕೋಲಾರದ ಜನರು ನನಗೆ ಪ್ರೀತಿ ಅಭಿಮಾನ ನೀಡಿದ್ದಾರೆ. ಇಲ್ಲಿನ ಜನರ ಕಷ್ಟಗಳನ್ನು ಆಲಿಸಲು ಪ್ರತೀ ವಾರವೂ ಇಲ್ಲಿಗೆ ಬಂದೇ ಬರುತ್ತೇನೆ. ಪ್ರತಿಯೊಬ್ಬರೂ ಬಂದು ನನ್ನಲ್ಲಿ ನೇರವಾಗಿ ಕಷ್ಟಗಳನ್ನು ಹೇಳಿಕೊಳ್ಳಬಹುದು. ಲೀಡರ್​​ಗಳ ಮೂಲಕವೇ ನನ್ನ ಬಳಿ ಬರಬೇಕೆಂದು ಏನೀಲ್ಲ. ಸಾಮಾನ್ಯರಲ್ಲಿ ಸಾಮಾನ್ಯರು ಕೂಡ ನನ್ನ ಬಳಿ ಬಂದು ನೇರವಾಗಿ ಕಷ್ಟ, ಸುಖ ಹೇಳಿಕೊಳ್ಳಬಹುದು. ಇದು ನನ್ನ ಸಂಪ್ರದಾಯ ಎಂದು ಸಿದ್ದರಾಮಯ್ಯ ಆಶ್ವಾಸನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net