ಜನರ ಬಳಿ ಹೋದ್ರೆ ಬಡಿಗೆ ಏಟು ಗ್ಯಾರೆಂಟಿ- ಹೀಗಂತ ಈ ಹಿಂದೆ ಬಿಎಸ್​ವೈ ಹೇಳಿದ್ದರು ಅಂದ್ರು ಸಿದ್ದರಾಮಯ್ಯ

siddaramayya
siddaramayya
Published on

ಬೆಂಗಳೂರು: ಈಗ ಆಡಳಿತ ನಡೆಸುತ್ತಿರುವವರು ಏನಾದರೂ ಜನರ ಬಳಿಗೆ ಹೋದರೆ ಬಡಿಗೆ ಏಟು ಬೀಳುವುದು ಖಚಿತವೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಜನರ ಬಳಿಗೆ ಹೋಗಿ ಬಡಿಗೆ ತೆಗೆದುಕೊಂಡು ಹೊಡೆಯುತ್ತಾರೆ ಎಂದು ಯಡಿಯೂರಪ್ಪ ಅವರು ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ನಮಗೆ ಹೇಳುತ್ತಿದ್ದರು. ಆದರೆ ನಮಗೆ ಯಾರೂ ಹೊಡೆಯಲಿಲ್ಲ. ಈಗ ಆಡಳಿತ ನಡೆಸುತ್ತಿರುವವರು ಏನಾದರೂ ಜನರ ಬಳಿಗೆ ಹೋದರೆ ಬಡಿಗೆ ಏಟು ಖಚಿತವೆಂದರು. ಬೆಂಗಳೂರಿನ ಚಿತ್ರಣವನ್ನೇ ಬದಲಾವಣೆ ಮಾಡುವುದಾಗಿ ಯಡಿಯೂರಪ್ಪ ಅವರು ಹೇಳಿದ್ದರು. ಅನುದಾನವೇ ಇಲ್ಲದ ಮೇಲೆ ಚಿತ್ರಣವನ್ನು ಅವರು ಹೇಗೆ ಬದಲಾವಣೆ ಮಾಡುವರೋ ತಿಳಿಯದು ಎಂದು ಹೇಳಿದರು.

ಡ್ರಗ್ಸ್ ಪ್ರಕರಣದ ಕುರಿತು ಮಾತನಾಡಿದ ಅವರು, ಈ ವಿಚಾರದಲ್ಲಿ ಪೊಲೀಸರು ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಪ್ರಮುಖ ಆರೋಪಿಗಳನ್ನು ಬಂಧಿಸಿದಂತೆ ಸರ್ಕಾರ ಒತ್ತಡ ಹೇರುತ್ತಿದೆ. ಹೀಗಾಗಿ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಲಿ ಎಂದರು.

ಡ್ರಗ್ಸ್ ಹಗರಣದಲ್ಲಿ ಪ್ರಮುಖ ಆರೋಪಿಗಳನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ. ಸರ್ಕಾರದ ಒತ್ತಡವೂ ಇದಕ್ಕೆ ಕಾರಣ ಇರಬಹುದು. ಅದನ್ನು ನಾನು ಅಲ್ಲಗಳೆಯುವುದಿಲ್ಲ. ಪೊಲೀಸರು ಈ ವಿಷಯದಲ್ಲಿ ಸರ್ಕಾರದ ಕೈಗೊಂಬೆಗಳಾಗಿದ್ದಾರೆ. ಸರ್ಕಾರ ಹೇಳಿದಂತೆ ಕೇಳುತ್ತಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net