More

    ಸಾಲ ಬರೆ ಜನರಿಗೆ ಹೊರೆ: ಸಂಪನ್ಮೂಲ ಹೆಚ್ಚಳಕ್ಕೆ ಸರ್ಕಾರ ಸರ್ಕಸ್, ತೆರಿಗೆ ಭಾರ ಬಹುತೇಕ ಫಿಕ್ಸ್

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಕರೊನಾ ಸಂಕಷ್ಟ ಬಗೆಹರಿಸುವ ನಿಟ್ಟಿನಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಕೇಂದ್ರ ಸರ್ಕಾರ, ರಾಜ್ಯಕ್ಕೆ ಸಾಲದ ಪ್ರಮಾಣವನ್ನು ಹೆಚ್ಚಿಸಿದ್ದರೂ ಅದಕ್ಕೆ ವಿಧಿಸಿರುವ ಪ್ರಮುಖ ಮೂರು ಷರತ್ತುಗಳಿಂದಾಗಿ ಜನಸಾಮಾನ್ಯರ ಮೇಲೆ ತೆರಿಗೆಯ ಹೊರೆ ಬೀಳುವುದು ಅನಿವಾರ್ಯವಾಗಿದೆ.

    ಕರೊನಾ ಮಹಾಮಾರಿ ಆರ್ಭಟದಿಂದಾಗಿ ರಾಜ್ಯ ಸರ್ಕಾರಕ್ಕೆ ಸಂಪನ್ಮೂಲ ಸಂಗ್ರಹಣೆಯ ದೊಡ್ಡ ಸವಾಲು ಎದುರಾಗಿದೆ. ಕೇಂದ್ರ ಸರ್ಕಾರ ಶೇ.3 ಇದ್ದ ಜಿಎಸ್​ಡಿಪಿ ಸಾಲದ ಪ್ರಮಾಣವನ್ನು ಶೇ.5ಕ್ಕೆ ಹೆಚ್ಚಿಸಲು ಸಮ್ಮತಿಸಿದೆಯಾದರೂ ನಾಲ್ಕು ಷರತ್ತುಗಳನ್ನು ವಿಧಿಸಿತ್ತು. ಅದರಲ್ಲಿ ಮೂರಕ್ಕೆ ರಾಜ್ಯ ಸಮ್ಮತಿಸಿದೆ. ಆ ಹಿನ್ನೆಲೆಯಲ್ಲೇ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮಕ್ಕೆ ತಿದ್ದುಪಡಿ ಮಾಡಿಕೊಳ್ಳುವ ಮೂಲಕ 33 ಸಾವಿರ ಕೋಟಿ ರೂ. ಸಾಲ ಪಡೆಯಲು ಮುಂದಾಗಿದೆ. ಒಂದು ದೇಶ, ಒಂದು ಪಡಿತರ, ವಿದ್ಯುತ್ ವಲಯದ ಸುಧಾರಣೆ, ಈಸ್ ಆಫ್ ಡೂಯಿಂಗ್ ಬಿಜಿನೆಸ್, ನಗರ ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಿಸುವ ಷರತ್ತುಗಳ ಪೈಕಿ ವಿದ್ಯುತ್ ವಲಯ ಹೊರತುಪಡಿಸಿ ಉಳಿದ ಮೂರು ಷರತ್ತುಗಳಿಗೆ ರಾಜ್ಯ ಸರ್ಕಾರ ಸಮ್ಮತಿಸಿದೆ.

    ಎಷ್ಟು ಸಾಲ ಸಿಗುತ್ತಿತ್ತು: ರಾಜ್ಯ ಸರ್ಕಾರ ಕೇಂದ್ರದ 4 ಷರತ್ತುಗಳಿಗೂ ಒಪ್ಪಿಕೊಂಡಿದ್ದರೆ 44,000 ಕೋಟಿ ರೂ. ತನಕ ಸಾಲ ಸಿಗುತ್ತಿತ್ತು. ಆದರೆ ಮೂರು ಷರತ್ತುಗಳಿಗಷ್ಟೇ ಸಮ್ಮತಿಸಿರುವುದರಿಂದ 33000 ಕೋಟಿ ರೂ.ವರೆಗೆ ಸಾಲ ಮಾಡಬಹುದಾಗಿದೆ. ಸರ್ಕಾರ ಬೇರೆ ದಾರಿ ಇಲ್ಲದೆ ಸಾಲದ ಷರತ್ತಿಗಳಿಗೆ ಸಮ್ಮತಿಸಿದೆ ಎಂದು ಹಣಕಾಸು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

    ವಿದ್ಯುತ್ ಕೈ ಬಿಟ್ಟಿದ್ದು ಏಕೆ

    ವಿದ್ಯುತ್ ವಲಯದಲ್ಲಿ ಕೆಲವೊಂದು ಸುಧಾರಣೆಗೆ ತಿಳಿಸಲಾಗಿತ್ತಾದರೂ ರೈತರ ವಿರೋಧ ಎದುರಾಗುತ್ತದೆ ಎಂಬ ಕಾರಣಕ್ಕೆ ಕೈಬಿಡಲಾಗಿದೆ. ರಾಜ್ಯದಲ್ಲಿ ಕೃಷಿ ಪಂಪ್​ಸೆಟ್​ಗಳಿಗೆ, ಭಾಗ್ಯ ಹಾಗೂ ಕುಟೀರ ಜ್ಯೋತಿಗಳಿಗೆ ಉಚಿತ ವಿದ್ಯುತ್ ಇದೆ. ಗ್ರಾಹಕರಿಗೆ ವಿದ್ಯುತ್ ಸಹಾಯಧನವನ್ನು ಬ್ಯಾಂಕ್​ಗಳ ಮೂಲಕ ನೇರ ಪಾವತಿ ಮಾಡಬೇಕೆಂದು ಷರತ್ತು ಇತ್ತು. ಇದನ್ನು ಒಪ್ಪಲು ಪ್ರತಿ ಸಂಪರ್ಕಕ್ಕೆ ಮೀಟರ್ ಕಡ್ಡಾಯವಾಗುತ್ತದೆ. ಆ ರೀತಿ ಮಾಡಲು ಮುಂದಾದರೆ ರೈತರಿಂದ ವಿರೋಧ ಬರುತ್ತದೆ ಎಂಬ ಕಾರಣಕ್ಕೆ ಕೈಬಿಡಲಾಗಿದೆ. ವಿತರಣೆ ಹಾಗೂ ತಾಂತ್ರಿಕ ನಷ್ಟ ತಗ್ಗಿಸಬೇಕೆಂಬ ಷರತ್ತೂ ಸಹ ಇದೆ.

    3 ವಲಯದ ಷರತ್ತುಗಳು

    * ಪ್ರತಿಯೊಂದು ಪಡಿತರ ಚೀಟಿಯನ್ನು ಆಧಾರ್ ಜತೆ ಲಿಂಕ್ ಮಾಡಬೇಕು

    * ಪ್ರತಿ ಪಡಿತರ ಅಂಗಡಿಯಲ್ಲಿ ಬೆರಳಚ್ಚು ತೆಗೆಯಲು ಎಲೆಕ್ಟ್ರಾನಿಕ್ಸ್ ಪಾಯಿಂಟ್ ಆಫ್ ಸೇಲ್ ಯಂತ್ರ ಅಳವಡಿಸಬೇಕು

    * ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್​ನಲ್ಲಿ ಹೂಡಿಕೆ ಸ್ನೇಹಿ ವಾತಾವರಣ ಇರಬೇಕು

    * ಕಾರ್ವಿುಕ ಕಾನೂನುಗಳು ಹೂಡಿಕೆದಾರರ ಸ್ನೇಹಿಯಾಗಿರುವಂತೆ ನೋಡಿಕೊಳ್ಳಬೇಕು

    * ಜಿಲ್ಲಾ ಮಟ್ಟದಲ್ಲಿ ಅಸೇಸ್​ವೆುಂಟ್ ಮಾಡುತ್ತಿರಬೇಕು

    * ಕೈಗಾರಿಕೆಗಳ ನವೀಕರಣ ತಾನೇ ತಾನಾಗಿ ಆಗಬೇಕೆ ಹೊರತು ಅಡ್ಡಿ ಆತಂಕಗಳಿರಬಾರದು

    * ಕೈಗಾರಿಕೆಗಳ ಪರಿಶೀಲನೆಗೆ ಅಧಿಕಾರಿಗಳು ಮೊದಲೇ ತಿಳಿಸಿ ಹೋಗಬೇಕು. ಅನಗತ್ಯ ಕಿರುಕುಳ ಇರಬಾರದು.

    * ಕೈಗಾರಿಕೆ ಇಲಾಖೆಯಲ್ಲಿ ಸಂಪೂರ್ಣ ಪಾರದರ್ಶಕ ವ್ಯವಸ್ಥೆ ಇರಬೇಕು

    * ನಗರಾಭಿವೃದ್ಧಿ ಆದಾಯ ಹೆಚ್ಚಾಗಬೇಕು

    * ಪಟ್ಟಣ ವ್ಯಾಪ್ತಿಯಲ್ಲಿ ನೀರು,ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು

    ಸಾಲ ಹೆಚ್ಚಳ ಲೆಕ್ಕಾಚಾರ

    ಕೇಂದ್ರ ಸರ್ಕಾರ ಜಿಎಸ್​ಡಿಪಿಯಲ್ಲಿ ಶೇ.2 ಸಾಲ ಹೆಚ್ಚಳಕ್ಕೆ ಒಪ್ಪಿದೆ. ಇದರಲ್ಲಿ ಶೇ.0.5ಕ್ಕೆ ಯಾವುದೇ ಷರತ್ತು ಇರುವುದಿಲ್ಲ. ನಾಲ್ಕು ಷರತ್ತುಗಳಲ್ಲಿ ಮೂರನ್ನು ಒಪ್ಪಿದರೆ ಹೆಚ್ಚುವರಿಯಾಗಿ ಶೇ.0.5 ಸಾಲ ಮಾಡಬಹುದು. ನಾಲ್ಕು ಷರತ್ತು ಪಾಲಿಸಲು ಒಪ್ಪಿದರೆ ತಲಾ ಶೇ.0.25 ಸಾಲ ಮಾಡಬಹುದು. ವಿದ್ಯುತ್ ಒಪ್ಪದ ಕಾರಣ ಉಳಿದ ಮೂರರಿಂದ ಶೇ. 1.75ರಷ್ಟು ಸಾಲ ಮಾಡಬಹುದು. ಹಿಂದೆ ಅವಕಾಶ ಇರುವ ಶೇ. 3 ಸೇರಿ ಒಟ್ಟಾರೆ ಶೇ.4.75ರಷ್ಟು ಸಾಲ ಮಾಡಬಹುದಾಗಿದೆ.

    2 ಬಾರಿ ಹೆಚ್ಚಳ ಆಗಿತ್ತು

    ಹಿಂದೆ ಪ್ರವಾಹದ ಕಾರಣಕ್ಕೆ 2008 ಹಾಗೂ 2010ರಲ್ಲಿ ಶೇ.0.5 ಸಾಲ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆಗ ಒಟ್ಟಾರೆ ಜಿಎಸ್​ಡಿಪಿಯ ಶೇ.3.5 ಸಾಲ ಮಾಡಲಾಗಿತ್ತು.

    ಜಿಎಸ್​ಡಿಪಿ ಎಷ್ಟು?

    ರಾಜ್ಯದ ಒಟ್ಟಾರೆ ಉತ್ಪನ್ನ ದರ 2019-20ನೇ ಸಾಲಿಗೆ 16,98,685 ಕೋಟಿ ರೂ.ಗಳು. 2020-21ನೇ ಸಾಲಿಗೆ 18,05,742 ಕೋಟಿ ರೂ.ಗಳೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅದು ಕಡಿಮೆಯಾಗುವ ಅಂದಾಜಿದೆ.

    ಸಾಲದ ಮೊತ್ತ ಎಷ್ಟು?

    ರಾಜ್ಯ ಸರ್ಕಾರ ಈ ಬಜೆಟ್​ನಲ್ಲಿ 53214.13 ಕೋಟಿ ರೂ.ಗಳ ಸಾಲ ಮಾಡುವ ಅಂದಾಜು ಮಾಡಿತ್ತು. ಇದೀಗ ಹೆಚ್ಚುವರಿ 33 ಸಾವಿರ ಕೋಟಿ ರೂ. ಸಾಲಕ್ಕೆ ನಿರ್ಧರಿಸಿದೆ. ಅದರಿಂದ ಸಾಲದ ಪ್ರಮಾಣ 4,01,692 ಕೋಟಿ ರೂ.ಗೆ ತಲುಪಲಿದೆ. ಜಿಎಸ್​ಟಿ ಪರಿಹಾರದ ಬದಲು ಕೇಂದ್ರದ ಸೂಚನೆಯಂತೆ 11 ಸಾವಿರ ಕೋಟಿ ರೂ. ಸಾಲ ಮಾಡಲಾಗುತ್ತಿದೆ. ಆದರೆ ಅದನ್ನು ಕೇಂದ್ರ ಸರ್ಕಾರ ಸೆಸ್​ಗಳ ಮೂಲಕ ತೀರಿಸಲಿದೆ ಎಂದು ಹಣಕಾಸು ಇಲಾಖೆ ಮೂಲಗಳು ಹೇಳುತ್ತವೆ.

    ಏರಿಕೆಗೆ ವಿರೋಧ

    ಕರೊನಾ ಹಿನ್ನೆಲೆಯಲ್ಲಿ ಅನೇಕ ಸ್ಥಳೀಯ ಸಂಸ್ಥೆಗಳು ತೆರಿಗೆ ಹೆಚ್ಚಳ ಮಾಡಬಾರದೆಂಬ ಬೇಡಿಕೆಯನ್ನು ಈಗಾಗಲೇ ಸರ್ಕಾರದ ಮುಂದಿಟ್ಟಿವೆ. ಇದು ಸರ್ಕಾರ ವನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ.

    ಕೇಂದ್ರದ ಉದ್ದೇಶ?

    • ಆದಾಯ ಹೆಚ್ಚಳವಾಗಿ ಸಹಾಯಧನ ಕಡಿಮೆಯಾಗಬೇಕು
    • ವಿಶ್ವಬ್ಯಾಂಕ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್​ಗಳದ್ದೂ ಇದೇ ಸಲಹೆೆ
    • ಇದು ಸಾಧ್ಯವಾದರಷ್ಟೇ ರಾಜ್ಯಗಳ ಆರ್ಥಿಕ ಅಭಿವೃದ್ಧಿ ಸಾಧ್ಯ

    ಷರತ್ತುಗಳೇನು?

    • ಒಂದು ದೇಶ ಒಂದು ಪಡಿತರ
    • ವಿದ್ಯುತ್ ವಲಯದ ಸುಧಾರಣೆ
    • ಈಸ್ ಆಫ್ ಡೂಯಿಂಗ್ ಬಿಜಿನೆಸ್
    • ನಗರ ಸ್ಥಳೀಯ ಸಂಸ್ಥೆಗಳ

    ಆದಾಯ ಹೆಚ್ಚಳ

    ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಹೆಚ್ಚುವರಿ ಸಾಲಕ್ಕೆ ವಿಧಿಸಿದ್ದ ನಾಲ್ಕು ಷರತ್ತುಗಳಲ್ಲಿ ಮೂರಕ್ಕೆ ರಾಜ್ಯ ಒಪ್ಪಿದೆ. ವಿದ್ಯುತ್ ಕ್ಷೇತ್ರದ ಸುಧಾರಣೆ ಈ ಹಂತದಲ್ಲಿ ಕಷ್ಟವೆಂದು ತೀರ್ವನಿಸಲಾಗಿದೆ. ಒಟ್ಟಾರೆ ಜಿಎಸ್​ಡಿಪಿಯ ಶೇ.4.75 ಸಾಲ ಮಾಡಬಹುದಾಗಿದೆ.
    | ಹಿರಿಯ ಅಧಿಕಾರಿ, ಹಣಕಾಸು ಇಲಾಖೆ

    ಜನತೆ ಮೇಲಿನ ಪರಿಣಾಮ

    • ನಗರ, ಪಟ್ಟಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ಥಿತಿ ಸುಧಾರಣೆ ಅಂದರೆ ತೆರಿಗೆ ಹೆಚ್ಚಿಸುವುದಾಗಿದೆ. ನೀರು, ನೈರ್ಮಲ್ಯ ವಲಯದಲ್ಲಿ ತೆರಿಗೆ ಹೆಚ್ಚಳದ ಜತೆಗೆ ಹೊಸ ಆಸ್ತಿ ನೋಂದಣಿ ಶುಲ್ಕ ಸಹ ಪರಿಷ್ಕರಣೆಯಾಗಬೇಕಿದೆ
    • ಈ ಹಿಂದೆಯೇ ಸರ್ಕಾರ ನಗರ ಪ್ರದೇಶದ ತೆರಿಗೆಗಳನ್ನು ಶೇ. 20 ರಿಂದ 30 ಹೆಚ್ಚಿಸಲು ನಿರ್ಧರಿಸಿತ್ತು. ಇದೀಗ ಸಾಲದ ಷರತ್ತಿಗೆ ಒಪ್ಪಿರುವುದರಿಂದ ಆದಷ್ಟು ಬೇಗ ಹೆಚ್ಚಳವಾಗಲಿದೆ ಎಂದು ಮೂಲಗಳು ಹೇಳುತ್ತವೆ
    • ಪೌರಸಂಸ್ಥೆಗಳಿಂದ 5000 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹ ಆಗುತ್ತದೆ ಎಂಬ ಅಂದಾಜಿದೆ. ಇದೀಗ 6000 ದಿಂದ 7000 ಕೋಟಿ ರೂ.ಗಳಿಗೂ ಹೆಚ್ಚಿನ ಸಂಗ್ರಹ ಮಾಡುವ ನಿರೀಕ್ಷೆ ಇದೆ.
    • ಪೌರಸಂಸ್ಥೆಗಳ ವ್ಯಾಪ್ತಿಯಲ್ಲಿ ಖಾಸಗಿ ಸಹಭಾಗಿತ್ವದ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂಬ ಷರತ್ತಿದೆ. ಖಾಸಗಿ ಸಹಭಾಗಿತ್ವ ಬಂದರೆ ಬಳಕೆದಾರರ ಶುಲ್ಕ ಸೇರಿದಂತೆ ಒಂದಷ್ಟು ಹೆಚ್ಚಿನ ಹೊರೆಯನ್ನು ಹೊರಬೇಕಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts