ಕಾಂಗ್ರೆಸ್ ಒಗ್ಗಟ್ಟಿನ ಸಂಗಮ: ಮೇಕೆದಾಟು ಯಾತ್ರೆಗೆ ಚಾಲನೆ; ಸಿದ್ದರಾಮಯ್ಯ, ಡಿಕೆಶಿ ಪವರ್ ಶೋ

Front
Published on

| ಶ್ರೀಕಾಂತ್ ಶೇಷಾದ್ರಿ ಸಂಗಮ

ಕೋವಿಡ್ ಮೂರನೇ ಅಲೆಯ ಆತಂಕದ ನಡುವೆಯೇ ಸರ್ಕಾರದ ವಿರುದ್ಧ ಜಿದ್ದಿಗೆ ಬಿದ್ದಂತೆ ಕಾಂಗ್ರೆಸ್ ಹಮ್ಮಿಕೊಂಡ ಮೇಕೆದಾಟು ಪಾದಯಾತ್ರೆಗೆ ಭಾನುವಾರ ಚಾಲನೆ ದೊರೆಯಿತು. ಹಿರಿಯರಿಂದ ಕಿರಿಯರವರೆಗೆ, ನಾಯಕರಿಂದ ಕಾರ್ಯಕರ್ತರವರೆಗೆ ಒಟ್ಟಿಗೆ ಹೆಜ್ಜೆ ಹಾಕುತ್ತ ಮೊದಲ ದಿನ 15 ಕಿ.ಮೀ ಕ್ರಮಿಸುವ ಮೂಲಕ ಸಂಗಮದ ಮಡಿಲಲ್ಲಿ ಒಗ್ಗಟ್ಟಿನ ಬಲ ಪ್ರದರ್ಶಿಸಿದರು.

ಪಾದಯಾತ್ರೆಯಲ್ಲಿ ರಾಜಕೀಯವಿಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡೇ ಬಂದಿದ್ದರೂ ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆ ಗುರಿಯಾಗಿಟ್ಟುಕೊಂಡು ಪಕ್ಷದಲ್ಲಿ ಹುರುಪು ತರಲು, ನಾಯಕರ ಒಗ್ಗಟ್ಟಿನ ಪ್ರದರ್ಶನ, ಎದುರಾಳಿಗಳ ವಿರುದ್ಧ ಶಕ್ತಿ ಪ್ರದರ್ಶನ ನಡೆಸುವುದಕ್ಕೂ ಈ ಯಾತ್ರೆ ಸಾಕ್ಷಿಯಂತೆ ಗೋಚರಿಸಿತು.

ಭಾನುವಾರ ಬೆಳಗ್ಗೆ ಸೂರ್ಯೋದಯ ಕಳೆದು ತಾಸಿನೊಳಗೆ, ಅರ್ಕಾವತಿ ಹಾಗೂ ಕಾವೇರಿ ನದಿ ಸಂಗಮವಾಗುವ ಸ್ಥಳದಲ್ಲಿ ಮೂರು ಬಾರಿ ಮುಳುಗಿ ಎದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ನದಿಗೆ ಪೂಜೆ ಸಲ್ಲಿಸಿ ಮೇಕೆದಾಟು ಪಾದಯಾತ್ರೆಗಾಗಿ ರೂಪಿಸಿದ ಧ್ವಜ ಹಿಡಿದು ತೆಪ್ಪದಲ್ಲಿ ದಡ ತಲುಪಿ ವೇದಿಕೆ ಏರಿ ದಂಡನಾಯಕನಂತೆ ಬಿಂಬಿಸಿಕೊಂಡರು. ಕಾವೇರಿ ನದಿದಂಡೆ ಮೇಲೆ ಹಾಕಿದ್ದ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಒಟ್ಟಿಗೆ ಚಾಲನೆ ನೀಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾದಯಾತ್ರೆ ತಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಎದುರಾಳಿ ಪಕ್ಷದ ವಿರುದ್ಧ ಹರಿಹಾಯ್ದರು.

ಬೆಳಗ್ಗೆ 8.30ಕ್ಕೆ ಆರಂಭವಾದ ಉದ್ಘಾಟನಾ ಕಾರ್ಯಕ್ರಮ ಮುಗಿಯುವಾಗ 11.15 ತಲುಪಿತ್ತು. ಅಷ್ಟರಲ್ಲಿ ಸೂರ್ಯ ನೆತ್ತಿಮೇಲೆ ಬಂದಿದ್ದ. ನಿರೀಕ್ಷೆಯಷ್ಟು ಕಾರ್ಯಕರ್ತರನ್ನು ಕಂಡ ಕೈ ನಾಯಕರು ಖುಷಿಯಲ್ಲೇ ಹೆಜ್ಜೆ ಹಾಕಲಾರಂಭಿಸಿದರು. ಬೆಂಗಳೂರುವರೆಗಿನ 157 ಕಿ.ಮೀ ಹಾದಿಯನ್ನು ಸವೆಸುವ ಮೇಕೆದಾಟು ಪಾದಯಾತ್ರೆಯ ಮೊದಲ ದಿನ ರಣ ಬಿಸಿಲಿನಲ್ಲಿ, ಏರುಮುಖದ ರಸ್ತೆಯಲ್ಲಿ ಸಾಗುವುದು ನಾಯಕರಿಗೆ ದುಸ್ಸಾಹಸವಾಗಿ ಕಾಣಿಸಿತು; ಕಾರ್ಯಕರ್ತರಲ್ಲಿ ಮಾತ್ರ ಉತ್ಸಾಹ ನೂರ್ಮಡಿಸಿತ್ತು.

ಸುಸ್ತಾದ ಡಿಕೆಶಿ: ಕೆಲ ದೂರ ಸಾಗಿ ಬಂದ ಬಳಿಕ ಡಿಕೆಶಿ ಸುಸ್ತಾಗಿ ಕುಳಿತರು. ಶಾಸಕಿ ಅಂಜಲಿ ಲಿಂಬಾಳ್ಕರ್ ಕೂಡ ಬಿಸಿಲಿನ ಹೊಡೆತ ತಾಳಲಾರದೆ ವೈದ್ಯರ ಮೊರೆ ಹೋದರು. ಹಿರಿಯರಾದ ಆರ್.ವಿ.ದೇಶಪಾಂಡೆ, ಜಿ.ಪರಮೇಶ್ವರ್ ಉತ್ಸಾಹದಲ್ಲಿ ಹೆಜ್ಜೆ ಹಾಕಿದರೆ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಮುಂಚೂಣಿಯಲ್ಲಿ ಕಾಣಿಸಿಕೊಂಡರು.

ದಾಹ ತಣಿಸಿದ ಮಜ್ಜಿಗೆ, ಎಳನೀರು: ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದಿದ್ದ ಕಾರ್ಯಕರ್ತರಿಗೆ ದಾರಿಯುದ್ದಕ್ಕೂ ಮಜ್ಜಿಗೆ, ಎಳನೀರು, ಕಬ್ಬಿನಹಾಲಿನ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಲ್ಲಿ ನಿಲುಗಡೆ ಮಾಡಿದ್ದ ಆಂಬುಲೆನ್ಸ್​ನಲ್ಲಿ ಕಾರ್ಯಕರ್ತರು ಆರೋಗ್ಯ ತಪಾಸಣೆಗೊಳಗಾದರು. ಕಾರ್ಯಕರ್ತರು ಶಾಸಕರೊಂದಿಗೆ ಸೆಲ್ಪಿ ತೆಗೆಸಿಕೊಳ್ಳಲು ಮುಗಿಬಿದ್ದಾಗ ಹಲವು ಬಾರಿ ನೂಕುನುಗ್ಗಲು ಉಂಟಾಯಿತು. ಒಂದು ಬಾರಿ ಅತಿಯಾದ ನೂಕುನುಗ್ಗಲಿನಿಂದ ಪೊಲೀಸರು ಸಹಿತ ಕಾರ್ಯಕರ್ತರು ನೆಲಕ್ಕುರುಳಿದ ಪ್ರಸಂಗವೂ ನಡೆಯಿತು.

ಬಿಜೆಪಿ ಎಷ್ಟೇ ತಡೆಯುವ ಪ್ರಯತ್ನ ಮಾಡಿದರೂ ಪಾದಯಾತ್ರೆ ನಿಲ್ಲಲ್ಲ. ನಮ್ಮ ಕಾಸು, ನಾವು ಆರಂಭಿಸಿದ ಯೋಜನೆ ಇದು. ನಮ್ಮ ನೀರು, ನಮ್ಮ ಹಕ್ಕು. | ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ ಅಂದು ಬ್ರಿಟಿಷರ ವಿರುದ್ಧ ಹೋರಾಟ ಮಾಡಿತ್ತು. ಇಂದು ಬಿಜೆಪಿ, ಜೆಡಿಎಸ್ ವಿರುದ್ಧ ಹೋರಾಟ ಮಾಡುತ್ತಿದೆ. ಪಾದಯಾತ್ರೆ ಬಗ್ಗೆ ಟೀಕೆ, ಅಡಚಣೆಗೆ ಹೆದರಲ್ಲ, ಸೊಪ್ಪು ಹಾಕಲ್ಲ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಸಿದ್ದರಾಮಯ್ಯ ವಾಪಸ್: ಸಿದ್ದರಾಮಯ್ಯ ಒಂದು ಕಿಮೀ ದಾಟಿ ಬರುವಾಗಲೇ ಬಸವಳಿದಿದ್ದರು, ನಂತರ ಕಾರು ಏರಿದರು. ಶನಿವಾರವಷ್ಟೇ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದ ಅವರು ಜ್ವರದಿಂದ ಬಳಲುತ್ತಿದ್ದರು. ಮಧ್ಯಾಹ್ನ ಊಟದ ವಿರಾಮಕ್ಕೆ ವ್ಯವಸ್ಥೆ ಮಾಡಿದ್ದ ಹೆಗ್ಗನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಂತೆ ಸಿದ್ದರಾಮಯ್ಯ ವಿಶ್ರಾಂತಿ ಅನಿವಾರ್ಯ ಎಂಬ ಸ್ಥಿತಿ ತಲುಪಿದ್ದರು. ಹೀಗಾಗಿ ಕಾರನ್ನೇರಿ ಹೊರಟರು. ಅವರನ್ನು ಬೆಂಗಳೂರಿಗೆ ಕಳುಹಿಸಲಾಯಿತು. ಸೋಮವಾರ ಮತ್ತೆ ಪಾದಯಾತ್ರೆ ಸೇರಿಕೊಳ್ಳಲಿದ್ದಾರೆ.

ಕಾಂಗ್ರೆಸ್ 5 ವರ್ಷಗಳ ಅಧಿಕಾರಾವಧಿಯಲ್ಲಿ ಮೇಕೆದಾಟು ಯೋಜನೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಯನ್ನು ಸಮರ್ಪಕವಾಗಿ ಸಲ್ಲಿಸಲಿಲ್ಲ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರು ವುದರಿಂದ ಪಾದಯಾತ್ರೆ ಕೈಗೊಂಡಿದೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಕಾಣದ ನಿಯಮಾವಳಿ: ಕೋವಿಡ್ ನಿಯಮಾವಳಿಯನ್ನು ಸಾರಾಸಗಟಾಗಿ ಪಕ್ಕಕ್ಕಿಟ್ಟು ಮೇಕೆದಾಟು ಪಾದಯಾತ್ರೆ ಭಾನುವಾರ ಹದಿನೈದು ಕಿಲೋಮೀಟರ್ ಕ್ರಮಿಸಿತು. ‘ನಮ್ಮ ನೀರಿಗಾಗಿ ಈಗಾಗಲೇ ಸಾಕಷ್ಟು ಹಾದಿ ಸವೆಸಿದ್ದೇವೆ, ಹೆಜ್ಜೆ ಇಟ್ಟಿದ್ದೇವೆ, ಯೋಜನೆ ಜಾರಿಯಾಗುವವರೆಗೂ ಸಾಗುತ್ತಲೇ ಇರುತ್ತೇವೆ, ಇದು ನಮ್ಮ ಬದ್ಧತೆ’ ಎಂದು ಕಾಂಗ್ರೆಸ್ ಹೇಳಿಕೊಂಡರೂ ಶಾಸಕರು, ನಾಯಕರು ಮೊದಲ ದಿನವೇ ಹೈರಾಣಾಗಿದ್ದರು. ದಾರಿಯುದ್ದಕ್ಕೂ ಸ್ವಾಗತ ಫಲಕಗಳು, ಎಲ್ಲ ನಾಯಕರಿಗೂ ಸಮಾನ ನ್ಯಾಯ ಎಂಬಂತೆ ಫ್ಲೆಕ್ಸ್​ಗಳು, ಧ್ವಜಗಳು ರಾರಾಜಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net