

ಬೆಂಗಳೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರ ಕಾಂಗ್ರೆಸ್ ಹೈಕಮಾಂಡ್ಗೆ ಕಗ್ಗಂಟಾಗಿ ಹೋಗಿದ್ದು, ದೆಹಲಿಯಲ್ಲಿ ಇನ್ನೇನು ಇದರ ಬಗ್ಗೆ ಮತ್ತೊಂದು ಸುತ್ತಿನ ಬಿರುಸಿನ ಚರ್ಚೆ ಆಗಲಿದೆ. ಈ ನಿಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೇ ದೆಹಲಿಗೆ ತಲುಪಿ ಸಜ್ಜಾಗಿದ್ದರೆ, ಸಿಎಂ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಆಗಿರುವ ಡಿ.ಕೆ.ಶಿವಕುಮಾರ್ ಇನ್ನೇನು ದೆಹಲಿಗೆ ಹೊರಡಲಿದ್ದಾರೆ.
ಮಾಜಿ ಸಿದ್ದರಾಮಯ್ಯ ಈಗಾಗಲೇ ದೆಹಲಿಗೆ ತಲುಪಿದ್ದು, ಅಲ್ಲಿನ ಖಾಸಗಿ ಹೋಟೆಲೊಂದರಲ್ಲಿ ತಮ್ಮ ಆಪ್ತರ ಜತೆ ಗಹನವಾದ ಚರ್ಚೆಯಲ್ಲಿದ್ದಾರೆ. ಅವರೊಂದಿಗೆ ಶಾಸಕರಾದ ಜಮೀರ್ ಅಹಮದ್ ಖಾನ್, ಎಂ.ಬಿ.ಪಾಟೀಲ್, ಪುತ್ರ ಯತೀಂದ್ರ, ಜಾಜ್೯, ಭೈರತಿ ಸುರೇಶ್ ಮುಂತಾದವರಿದ್ದಾರೆ.
ಇತ್ತ ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಇನ್ನೇನು ದೆಹಲಿಗೆ ಹೊರಡಲಿದ್ದು, ಆ ಕುರಿತ ತಯಾರಿ ನಡೆದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಾಸಕರು, ಅಭಿಮಾನಿಗಳೂ ಕಾಯುತ್ತಿದ್ದು, ಡಿಕೆಶಿ ಭದ್ರತೆಗಾಗಿ ಪೊಲೀಸರು ಕೂಡ ಸಜ್ಜಾಗಿದ್ದಾರೆ. ದೆಹಲಿಗೆ ತೆರಳಲಿರುವ ಡಿ.ಕೆ.ಶಿವಕುಮಾರ್ಗೆ ಶುಭ ಕೋರಲು ಶಾಸಕ ಬೇಳೂರು ಗೋಪಾಲಕೃಷ್ಣ ವಿಮಾನನಿಲ್ದಾಣಕ್ಕೆ ಆಗಮಿಸಿದ್ದಾರೆ.