ಕನ್ನಡತಿ ಶ್ರುತಿ, ಕೃಷ್ಣಮೂರ್ತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Untitled-design-8-3
Published on

23 ಲೇಖಕರಿಗೆ ಬಾಲ ಸಾಹಿತ್ಯ, ಯುವ ಪುರಸ್ಕಾರ ನ್ಯಾಷನಲ್ ಅಕಾಡೆಮಿ ಆಫ್ ಲೆಟರ್ಸ್ ಪ್ರಶಸ್ತಿಯೂ ಪ್ರಕಟ

ನವದೆಹಲಿ: ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವ ಪುರಸ್ಕಾರ ಶನಿವಾರ ಪ್ರಕಟವಾಗಿದೆ. ಕರ್ನಾಟಕದ ಇಬ್ಬರು ಸಹಿತ ವಿವಿಧ ಭಾಷೆಯ 23 ಬರಹಗಾರರು ಗೌರವಕ್ಕೆ ಪಾತ್ರವಾಗಿದ್ದಾರೆ. ಜತೆಗೆ ನ್ಯಾಷನಲ್ ಅಕಾಡೆಮಿ ಆಫ್ ಲೆಟರ್ಸ್-2024ರ ಬಾಲ ಸಾಹಿತ್ಯ ಪುರಸ್ಕಾರ ಕೂಡ ಪ್ರಕಟವಾಗಿದ್ದು, 24 ಮಂದಿಗೆ ಪ್ರಶಸ್ತಿ ಸಿಕ್ಕಿದೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ. ಯುವ ಹಾಗೂ ಬಾಲ ಪುರಸ್ಕಾರವು ತಾಮ್ರ ಫಲಕ ಮತ್ತು 50,000 ರೂ.ಗಳ ಚೆಕ್ ಒಳಗೊಂಡಿರುತ್ತದೆ.

ಯುವ ಪುರಸ್ಕಾರ: 10 ಕವನ ಪುಸ್ತಕಗಳು, ಏಳು ಸಣ್ಣ ಕಥೆಗಳ ಸಂಕಲನಗಳು, ಎರಡು ಲೇಖನಗಳ ಸಂಕಲನಗಳು ಮತ್ತು ಒಂದು ಪ್ರಬಂಧ, ಒಂದು ಕಾದಂಬರಿ, ಒಂದು ಗಜಲ್​ಗಳ ಪುಸ್ತಕ ಮತ್ತು ಒಂದು ಸ್ಮರಣ ಸಂಚಿಕೆಗೆ ಯುವ ಪುರಸ್ಕಾರ ನೀಡಲಾಗಿದೆ. ಕೆ. ವೈಶಾಲಿ ಅವರ ಆತ್ಮಚರಿತ್ರೆ ಹೋಮ್ೆಸ್: ಗ್ರೋಯಿಂಗ್ ಅಪ್ ಲೆಸ್ಬಿಯನ್ ಆಂಡ್ ಡಿಸ್ಲೆಕ್ಸಿಕ್ ಇನ್ ಇಂಡಿಯಾ ಕೃತಿಗೆ, ಗೌರವ್ ಪಾಂಡೆ ಅವರ ಸ್ಮೃಯೋಂ ಕೆ ಬೀಚ್ ಗಿರಿ ಹೈ ಪೃಥ್ವಿ ಕವನ ಸಂಕಲನಕ್ಕೆ ಪ್ರಶಸ್ತಿ ಲಭಿಸಿದೆ.

ಆಯ್ಕೆಯಾದ ಪ್ರಮುಖರು: ಶ್ರುತಿ ಬಿ.ಆರ್. (ಕನ್ನಡ), ನಯನಜ್ಯೋತಿ ಶರ್ಮಾ (ಅಸ್ಸಾಮಿ), ಸುತಾಪ ಚಕ್ರವರ್ತಿ (ಬಂಗಾಳಿ), ರಾಣಿ, ಬಾರೋ (ಬೋಡೋ), ಹೀನಾ ಚೌಧರಿ (ಡೋಗ್ರಿ), ರಿಂಕು ರಾಥೋಡ್ (ಗುಜರಾತಿ), ಮೊಹಮ್ಮದ್ ಅಶ್ರಫ್ ಜಿಯಾ (ಕಾಶ್ಮೀರಿ), ಅದ್ವೈತ್ ಸಲ್ಗಾಂವ್ಕರ್ (ಕೊಂಕಣಿ), ರಿಂಕಿ ಝಾ ರಿಷಿಕಾ (ಮೈಥಿಲಿ), ಶ್ಯಾಮಕೃಷ್ಣನ್ ಆರ್ (ಮಲಯಾಳಂ).

ಬಾಲ ಸಾಹಿತ್ಯ ಪುರಸ್ಕಾರ: 7 ಕಾದಂಬರಿ, 6 ಕವನ, 4 ಕಥೆಗಳು, 5 ಸಣ್ಣ ಕಥೆ, ಒಂದು ನಾಟಕ ಮತ್ತು ಒಂದು ಐತಿಹಾಸಿಕ ಕಾದಂಬರಿಗೆ ಬಾಲ ಸಾಹಿತ್ಯ ಪುರಸ್ಕಾರ ನೀಡಲಾಗಿದೆ.

ಆಯ್ಕೆಯಾದ ಪ್ರಮುಖರು: ಕೃಷ್ಣಮೂರ್ತಿ ಬಿಳಿಗೆರೆ (ಕನ್ನಡ), ರಂಜು ಹಜಾರಿಕಾ (ಅಸ್ಸಾಮಿ), ದೀಪನ್ವಿತಾ ರಾಯ್ (ಬಂಗಾಳಿ), ಬರ್ಗಿನ್ ಜೆಕೋವಾ ಮಚಹರಿ (ಬೋಡೋ), ಬಿಶನ್ ಸಿಂಗ್ (ಡೋಗ್ರಿ), ಗಿರಾ ಪಿನಾಕಿನ್ ಭಟ್ (ಗುಜರಾತಿ), ಮುಜಾಫರ್ ಹುಸೇನ್ ದಿಲ್ಬರ್ (ಕಾಶ್ಮೀರಿ), ಹರ್ಷ ಸದ್ಗುರು ಶೆಟ್ಟಿ (ಕೊಂಕಣಿ), ನಾರಾಯಣಗಿ (ಮೈಥಿಲಿ), ಉನ್ನಿ ಅಮ್ಮಾಯಂಬಲಂ (ಮಲಯಾಳಂ), ಕ್ಷೇತ್ರಿಮಯೂನ್ ಸುದಾನಿ (ಮಣಿಪುರಿ).

ಮಕ್ಕಳ ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ

ತಿಪಟೂರು ತಾಲೂಕು ಬಿಳಿಗೆರೆಯ ನಿವೃತ್ತ ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಅವರ ‘ಛೂ ಮಂತ್ರಯ್ಯನ ಕಥೆಗಳು’ ಮಕ್ಕಳ ಕಥೆಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ. ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾಗಿ ನಿವೃತ್ತಿ ಪಡೆದಿರುವ ಕೃಷ್ಣಮೂರ್ತಿ, ಮಕ್ಕಳಿಗಾಗಿಯೇ ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದಾರೆ. ಸರ್ಕಾರಿ ಶಾಲೆಗಳಿಗೆ ಭೇಟಿ ಕೊಟ್ಟು ಮಕ್ಕಳಿಗೆ ಹಾಡು ಮತ್ತು ಕಥೆಗಳನ್ನು ಹೇಳಿಕೊಡುವುದು ಅವರ ಹವ್ಯಾಸ. ಮಕ್ಕಳಿಗಾಗಿ ಹಲವು ಪದ್ಯ ಮತ್ತು ನಾಟಕ ರಚಿಸಿದ್ದಾರೆ. ಕಣ್ಮುಚ್ಚಾಲೆ ಮಕ್ಕಳ ಗುಂಪು ಎಂಬ ಚಿಣ್ಣರ ಸಂಘಟನೆ ಕೂಡ ಕಟ್ಟಿದ್ದಾರೆ. ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಆರ್ಯಭಟ ಸಾಹಿತ್ಯ ಪ್ರಶಸ್ತಿ, ಜಿಎಸ್​ಎಸ್ ಕಾವ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ಈಗಾಗಲೆ ಲಭಿಸಿವೆ. ‘ತೀರಿ ಹೋದ ಹಳ್ಳದಗುಂಟ’ ಎಂಬ ಪ್ರಬಂಧ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿದೆ.

ಛೂ ಮಂತ್ರಯ್ಯನ ಕಥೆಯನ್ನು ಮಕ್ಕಳ ಅಂತಃಕರಣ ಇರುವವರು ಯಾರು ಬೇಕಾದರೂ ಓದುಬಹುದು. ನನ್ನ ಆಸಕ್ತದಾಯಕ ಸಾಹಿತ್ಯ ಕೃಷಿ ಮಕ್ಕಳ ಸಾಹಿತ್ಯ. ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ಕೊಡಬೇಕಿದೆ. ಆ ಮೂಲಕ ಭವಿಷ್ಯದ ಉತ್ತಮ ಶಿಕ್ಷಕ, ರಾಜಕಾರಣಿ, ವೈದ್ಯ, ಇಂಜಿನಿಯರ್​ಗಳನ್ನು ನಿರ್ವಿುಸಬೇಕಿದೆ.

| ಕೃಷ್ಣಮೂರ್ತಿ ಬಿಳಿಗೆರೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ

ಕೆಎಎಸ್ ಅಧಿಕಾರಿ ಶ್ರುತಿ

ಚಿಕ್ಕಮಗಳೂರು ಜಿಲ್ಲೆ ಬೀರೂರು ಮೂಲದ ಕೆಎಎಸ್ ಅಧಿಕಾರಿ ಶ್ರುತಿ ಬಿ.ಆರ್. ಅವರ ಮೊದಲ ಕೃತಿ ಜೀರೋ ಬ್ಯಾಲನ್ಸ್ ಕವನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ತಹಸೀಲ್ದಾರ್ ಆಗಿದ್ದಾಗಲೇ ಕವನ ಸಂಕಲನ ರಚಿಸಿದ್ದರು. ರವೀಂದ್ರ - ರೇಣುಕಾ ದಂಪತಿ ಪುತ್ರಿ ಶ್ರುತಿ ಅವರಿಗೆ ಅಜ್ಜಿಯಿಂದ ಓದುವ ಹವ್ಯಾಸ ಬೆಳೆದಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ಶ್ರುತಿ ನೆಲೆಸಿದ್ದು, ಮೈಸೂರು ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿ ಪಡೆದಿದ್ದಾರೆ.

ಕಾರ್ಯದೊತ್ತಡದಿಂದ ಹೊರಬರಲು ಓದು ಹಾಗೂ ಬರವಣಿಗೆ ಸಹಕಾರಿ. ಇದೇ ವರ್ಷದ ಒಳಗಾಗಿ ‘ಎಲ್ಲೆಗಳ ದಾಟಿದವಳು’ ಎಂಬ ಕಥಾ ಸಂಕಲವನ್ನು ಪಬ್ಲಿಷ್ ಮಾಡುವ ಸಿದ್ಧತೆಯಲ್ಲಿದ್ದೇನೆ.

| ಶ್ರುತಿ ಬಿ.ಆರ್. ಕೆಎಎಸ್ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net