ಹವಾಮಾನ ವೈಪರೀತ್ಯಕ್ಕೆ ಕುಗ್ಗಿದ ಇಳುವರಿ: ಟೊಮ್ಯಾಟೋ ಬೆಲೆ ವರ್ಷಕ್ಕೆ ಶೇ.168 ಏರಿಕೆ!

Crop
Published on

ನವದೆಹಲಿ: ಹವಾಮಾನ ವೈಪರೀತ್ಯದಿಂದ ಈ ವರ್ಷ ಹಲವಾರು ಬೆಳೆಗಳ ಇಳುವರಿಗೆ ದೊಡ್ಡ ಹೊಡೆತ ಬಿದ್ದಿದೆ. ಹಣ್ಣು ಮತ್ತು ತರಕಾರಿಗಳು ದುಬಾರಿಯಾಗಿವೆ. ಆಹಾರದ ಹಣದುಬ್ಬರವೂ ಎಂಟು ವರ್ಷಗಳ ಗರಿಷ್ಠ ಶೇಕಡ 7.79ಕ್ಕೆ ತಲುಪಿದೆ ಎಂದು ಆಹಾರ ಸಚಿವಾಲಯದ ದತ್ತಾಂಶ ವರದಿ ಹೇಳಿದೆ.

ಬಹುತೇಕ ಭಾರತೀಯ ಖಾದ್ಯಗಳ ಮೂಲ ಘಟಕವಾದ ಟೊಮ್ಯಾಟೋದ ಸರಾಸರಿ ಚಿಲ್ಲರೆ ಮಾರಾಟ ದರವು ತಿಂಗಳ ಹಿಂದಿನ ದರಕ್ಕೆ ಹೋಲಿಸಿದರೆ ಶೇ.70 ಏರಿಕೆಯಾಗಿ ಒಂದು ಕಿಲೋಕ್ಕೆ 53.75 ರೂ. ಆಗಿದೆ. ಇದು ಹಿಂದಿನ ವರ್ಷದ ದರಕ್ಕಿಂತ ಶೇ. 168 ಏರಿದಂತಾಗಿದೆ. ಪ್ರಸಕ್ತ ಹಿಂಗಾರು ಅವಧಿಯಲ್ಲಿ ಆಂಧ್ರಪ್ರದೇಶ, ಕರ್ನಾಟಕದಂತಹ ರಾಜ್ಯಗಳಿಂದ ಟೊಮ್ಯಾಟೋ ಪೂರೈಕೆ ಕಡಿಮೆಯಾಗಿದೆ.

ನಿಂಬೆ ಬೆಳೆ ಕಡಿಮೆ: ಜನವರಿ ತಿಂಗಳು ಹೂವು ಬಿಡುವ ಹಂತದಲ್ಲಿದ್ದಾಗ ಅಕಾಲಿಕ ಮಳೆ ಬಂದ ಕಾರಣ ನಿಂಬೆ ಬೆಳೆ ಹಾನಿಗೀಡಾಗಿತ್ತು. ಬಳಿಕ, ಏಪ್ರಿಲ್-ಮಾರ್ಚ್​ನಲ್ಲಿ ಬಿಸಿಲಿನ ತಾಪ ಕೂಡ ಇಳುವರಿ ಕುಸಿಯುವಂತೆ ಮಾಡಿತು. ಹೀಗಾಗಿ ನಿಂಬೆ ಹಣ್ಣಿನ ಬೆಲೆ ಗಗನಮುಖಿ ಆಗಿ ಕಿಲೋಗೆ 200 ರೂ. ಆಯಿತು.

ಮಾವು ಶೇ.20 ಉತ್ಪಾದನೆ ಕುಂಠಿತ: ಪ್ರತಿಕೂಲ ಹವಾಮಾನದ ಕಾರಣ ಈ ಬೇಸಿಗೆಯಲ್ಲಿ ಮಾವಿನ ಹಣ್ಣು ಉತ್ಪಾದನೆ ಶೇ.20 ಕಡಿಮೆಯಾಗಿದೆ. ಉತ್ತರ ಪ್ರದೇಶದಲ್ಲಿ ಇಳುವರಿ ಶೇ.20 ಕಡಿಮೆಯಾಗಿದೆ. ಗುಣಮಟ್ಟದ ಮೇಲೂ ಪರಿಣಾಮ ಬೀರಿದೆ. ಮಾವಿನ ಮರಗಳು ಹೂ ಬಿಡುವ ಡಿಸೆಂಬರ್-ಜನವರಿಯಲ್ಲಿ ಭಾರಿ ಮಳೆ, ಬೇಸಿಗೆಯ ಆರಂಭದಲ್ಲಿ ಫಸಲು ಬಂದಿದ್ದು ಇಳುವರಿ ಕುಸಿತಕ್ಕೆ ಕಾರಣ ಎಂದು ಭಾರತದ ಮ್ಯಾಂಗೋ ಮ್ಯಾನ್ ಎಂದು ಕರೆಯಲ್ಪಡುವ ಪ್ರಶಸ್ತಿ ವಿಜೇತ ಮಾವಿನ ತಳಿಗಾರ ಹಾಜಿ ಕಲೀಮುಲ್ಲಾ ಖಾನ್ ಹೇಳಿದರು.

ಬಿಸಿಗಾಳಿ ಪ್ರಮಾಣ ಹೆಚ್ಚಳ

ನವದೆಹಲಿ: ಮುಂದಿನ ಎರಡು-ಮೂರು ದಿನಗಳಲ್ಲಿ ದೇಶದ ವಾಯವ್ಯ ಮತ್ತು ಮಧ್ಯ ಭಾಗದಲ್ಲಿ ಬಿಸಿಗಾಳಿ ಪ್ರಮಾಣ ಹೆಚ್ಚಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಶುಕ್ರವಾರದಿಂದ ರಾಜಸ್ಥಾನ, ಜಮ್ಮು ಭಾಗ, ಹಿಮಾಚಲ ಪ್ರದೇಶ, ಉತ್ತರಾಖಂಡ, ದಕ್ಷಿಣ ಪಂಜಾಬ್ ಮತ್ತು ದಕ್ಷಿಣ ಹರಿಯಾಣ, ದೆಹಲಿಯಲ್ಲಿ ಬಿಸಿಗಾಳಿ ಪರಿಸ್ಥಿತಿಗಳು ಹೆಚ್ಚಲಿದೆ ಎಂದು ಇಲಾಖೆ ತಿಳಿಸಿದೆ. ವಿದರ್ಭ, ಜಾರ್ಖಂಡ್, ಒಡಿಶಾ ಮತ್ತು ಛತ್ತೀಸಗಢದಲ್ಲಿ ಜೂನ್ 6ರವರೆಗೆ ಬಿಸಿಗಾಳಿ ಇರಲಿದೆ. ದಕ್ಷಿಣ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಉತ್ತರ ಭಾಗದಲ್ಲಿ ತಾಪಮಾನ ಹೆಚ್ಚಾಗಲಿದೆ. ರಾಜಧಾನಿ ದೆಹಲಿಯಲ್ಲಿ ಬಿಸಿಗಾಳಿ ಹೆಚ್ಚಾಗಲಿದ್ದು, ಹವಾಮಾನ 44 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಹೇಳಲಾಗಿದೆ.

ಏಕ ಬಳಕೆಯ ಪ್ಲಾಸ್ಟಿಕ್ ನಿಲ್ಲಿಸಲು ರಾಜ್ಯಗಳಿಗೆ ಪತ್ರ

ನವದೆಹಲಿ: ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ದೇಶವನ್ನು ಏಕ ಬಳಕೆಯ ಪ್ಲಾಸ್ಟಿಕ್​ನಿಂದ ಮುಕ್ತವಾಗಿಸಲು ರಾಜ್ಯ ಸರ್ಕಾರ, ನಗರ ಸ್ಥಳೀಯ ಸಂಸ್ಥೆಗಳು ಸೇರಿ ಸ್ವಚ್ಛ ಮತ್ತು ಹಸಿರು ಅಭಿಯಾನ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಪತ್ರ ಬರೆದಿದೆ. ಜೂನ್ 30ರ ಒಳಗಾಗಿ ಏಕಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಲ್ಲಿಸಬೇಕು ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿವರವಾದ ಸಲಹೆ ನೀಡಿದೆ.

ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆಗೆ ವಿಶೇಷ ಒತ್ತು ನೀಡುವುದರೊಂದಿಗೆ ಬೃಹತ್ ಪ್ರಮಾಣದ ಸ್ವಚ್ಛತಾ ಅಭಿಯಾನಗಳಿಗೆ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳು, ಸ್ವಯಂಸೇವಾ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳು, ಸ್ಥಳೀಯ ಎನ್​ಜಿಒಗಳು/ಸಿಎಸ್​ಒಗಳು, ಎನ್​ಎಸ್​ಎಸ್, ಎನ್​ಸಿಸಿ ಕೆಡೆಟ್​ಗಳು, ಮಾರುಕಟ್ಟೆ ಸಂಘ, ಕಾರ್ಪೆರೇಟ್ ಘಟಕಗಳು ಅಭಿಯಾನದಲ್ಲಿ ಪಾಲ್ಗೊಳ್ಳಲಿವೆ. ಕಳೆದ ಮೇ 29ರಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್​ನಲ್ಲಿ ಈ ಬಗ್ಗೆ ಮಾತನಾಡಿದ್ದನ್ನು ನೆನಪಿಸಿಕೊಳ್ಳಬಹುದು. ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆ ಸಸ್ಯಗಳನ್ನು ನೆಡಲು ಜನರು ಮುಂದಾಗಬೇಕು ಎಂದು ಮೋಡಿ ಹೇಳಿದ್ದರು ಎಂದು ಪತ್ರದಲ್ಲಿ ಉಲೇಖಿಸಲಾಗಿದೆ.

ಪರಿಸರಕ್ಕಾಗಿ ಜೀವನ ಶೈಲಿ ಆಂದೋಲನ

ನವದೆಹಲಿ: ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ನರೇಂದ್ರಮೋದಿ ಜೂನ್ 5ರಂದು (ಭಾನುವಾರ) ವಿಡಿಯೋ ಕಾನ್ಪೆರೆನ್ಸ್ ಮೂಲಕ ‘ಪರಿಸರಕ್ಕಾಗಿ ಜೀವನಶೈಲಿ’ (ಲೈಫ್ ) ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ. ಪರಿಸರ ಪ್ರಜ್ಞೆಯ ಜೀವನ ಶೈಲಿ ಅಳವಡಿಸಿಕೊಳ್ಳಲು ಶಿಕ್ಷಣ ತಜ್ಞರು, ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಿಂದ ಸಲಹೆ, ಸೂಚನೆಗಳನ್ನು ಆಹ್ವಾನಿ ಸುವ ‘ಲೈಫ್ ಗ್ಲೋಬಲ್ ಕಾಲ್ ಫಾರ್ ಫೇಪರ್ಸ್’ ಕಾರ್ಯಕ್ರಮವನ್ನೂ ಆರಂಭಿ ಸಲಾಗುತ್ತದೆ. ಜಗತ್ತಿನಾದ್ಯಂತ ವ್ಯಕ್ತಿಗಳು, ಸಮುದಾಯಗಳು ಮತ್ತು ಸಂಸ್ಥೆಗಳ ಮೇಲೆ ಪರಿಸರದ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಮಾತನಾಡಲಿದ್ದಾರೆ. ಬಿಲ್ ಆಂಡ್ ಗೇಟ್ಸ್ ಫೌಂಡೇಷನ್​ನ ಸಹ ಅಧ್ಯಕ್ಷ ಬಿಲ್ ಗೇಟ್ಸ್, ಲಾರ್ಡ್ ನಿಕೋಲಸ್ ಸ್ಟರ್ನ್, ಹವಾಮಾನ ಅರ್ಥಶಾಸ್ತ್ರಜ್ಞ ಪ್ರೊ. ಕ್ಯಾಸ್ ಸನ್​ಸ್ಟೈನ್, ನಡ್ಜ್ ಥಿಯರಿ ಲೇಖಕ ಅನಿರುದ್ಧ ದೇಶಗುಪ್ತ, ವಿಶ್ವ ಸಂಪನ್ಮೂಲ ಸಂಸ್ಥೆ ಅಧ್ಯಕ್ಷ ಇಂಗರ್ ಆಂಡರ್​ಸನ್, ಯುಎನ್​ಇಪಿ ಜಾಗತಿಕ ಮುಖ್ಯಸ್ಥ ಅಚಿಮ್ ಸ್ಟೈನರ್, ಯುಎನ್​ಡಿಪಿ ಜಾಗತಿಕ ಮುಖ್ಯಸ್ಥ ಡೇವಿಡ್ ಮಾಲ್ಪಾಸ್, ವಿಶ್ವಬ್ಯಾಂಕ್ ಅಧ್ಯಕ್ಷರು ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಕಳೆದ ವರ್ಷ ಗ್ಲಾಸ್ಗೊದಲ್ಲಿ ನಡೆದ 26ನೇ ಯುನೈಟೆಡ್ ಕ್ಲೈಮೇಟ್ ಚೇಂಚ್ ಕಾನ್ಪರೆನ್ಸ್ ಆಫ್ ದಿ ಪಾರ್ಟಿಸ್ (ಕಾಪ್ 26) ನಲ್ಲಿ ಮೋದಿ ಲೈಫ್ ಪರಿಕಲ್ಪನೆ ಪರಿಚಯಿಸಿದ್ದರು. ಈ ಕಲ್ಪನೆಯು ಪರಿಸರ ಪ್ರಜ್ಞೆಯ ಜೀವನಶೈಲಿ ಉತ್ತೇಜಿಸುತ್ತದೆ. ಅದು ಬುದ್ಧಿರಹಿತ, ವಿನಾಶ ಕಾರಿ ಬಳಕೆಯ ಬದಲಿಗೆ ಮನಸ್ಸಿನ, ಉದ್ದೇಶಪೂರ್ವಕ ಬಳಕೆ ಮೇಲೆ ಕೇಂದ್ರೀಕರಿಸುತ್ತದೆ.

ಮಣ್ಣು ಉಳಿಸಿ ಅಭಿಯಾನ: ಪ್ರಧಾನಿ ಮೋದಿ ನವದೆಹಲಿಯ ವಿಜ್ಞಾನ ಭವನದಲ್ಲಿ ಮಣ್ಣು ಉಳಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುವರು. ಮಣ್ಣಿನ ಗುಣಮಟ್ಟ ಕುಸಿಯುತ್ತಿರುವುದು ಹಾಗೂ ಗುಣಮಟ್ಟ ರಕ್ಷಣೆಯ ಕುರಿತಂತೆ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಪ್ರಧಾನಕಚೇರಿಯ ಪ್ರಕಟಣೆ ತಿಳಿಸಿದೆ. ಈ ಅಭಿಯಾನವನ್ನು ಇದೇ ವರ್ಷದ ಮಾರ್ಚ್​ನಲ್ಲಿ ಈಶಾ ಫೌಂಡೇಷನ್​ನ ಸದ್ಗುರು ವಾಸುದೇವ ಆರಂಭಿಸಿದ್ದರು. ಅಭಿಯಾನದ ಅಂಗವಾಗಿ 27 ದೇಶಗಳಲ್ಲಿ 100 ದಿನಗಳ ಕಾಲ ಮೋಟಾರ್ ಸೈಕಲ್​ನಲ್ಲಿ ಜಾಥಾ ನಡೆಸಿ, ಈ ವಾರ ಆವರು ಭಾರತಕ್ಕೆ ಆಗಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net