

ಕಡೂರು: ಪಟ್ಟಣದ ಛತ್ರದ ಬೀದಿಯಲ್ಲಿ ಶ್ರೀ ದುರ್ಗಾ ಸೇವಾ ಸಮಿತಿಯಿಂದ ಪ್ರತಿಷ್ಠಾಪನೆಗೊಂಡಿರುವ ದುರ್ಗಾದೇವಿ ಆಸ್ಥಾನ ಮಂಟಪದಲ್ಲಿ ಮಂಗಳವಾರ ಸಂಜೆ ಸಾಮೂಹಿಕ ಸಹಸ್ರಕುಂಕುಮಾರ್ಚನೆ ಪೂಜಾ ಕಾರ್ಯ ಮಹಿಳೆಯರಿಂದ ಶಾಸೋಕ್ತವಾಗಿ ನೆರವೇರಿತು.
ಆಗಮಿಕರಾದ ಭದ್ರಾವತಿ ಜಗನ್ನಾಥ ಶರ್ಮಾ ಸಂಗಡಿಗರಿಂದ ಸಂಕಲ್ಪ ಪೂಜಾ ಕಾರ್ಯದೊಂದಿಗೆ ಆರಂಭಗೊಂಡು ಮಹಿಳೆಯರಿಂದಲೇ ಕುಂಕುಮಾರ್ಚನೆಯನ್ನು ದೇವಿಗೆ ಸಮರ್ಪಿಸಿದರು. ನಂತರ ಸಮಿತಿಯಿಂದ ಮಹಿಳೆಯರಿಗೆ ಮಡಿಲಕ್ಕಿ ನೀಡುವ ಮೂಲಕ ಗೌರವಿಸಲಾಯಿತು. ದೇವಿಯ ವಿಶೇಷ ಪೂಜೆ ನೆರವೇರಿದ ಬಳಿಕ ವರುಣನ ಆಗಮನ ಭಕ್ತರಲ್ಲಿ ಹರ್ಷ ಮೂಡಿಸಿತು.
ಬುಧವಾರ ಸಂಜೆ ದೀಪೋತ್ಸವ ನಡೆಯಿತು. ಮಹಿಳೆಯರು ಮನೆಯಿಂದಲೇ ದೀಪೋತ್ಸವಕ್ಕಾಗಿ ಪೂಜಾ ಸಾಮಗ್ರಿಗಳನ್ನು ತಂದು ದೇವಿಯ ಆಸ್ಥಾನ ಮಂಟಪದ ಬಳಿ ಪೂಜೆ ನೆರವೇರಿಸುವುದರೊಂದಿಗೆ ಭಕ್ತಿಪರವಶರಾದರು. ಬಳಿಕ ರಂಗಪೂಜೆ ಕಾರ್ಯಕ್ರಮ ನಡೆಯಿತು.
ಸಮಿತಿ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಮಾತನಾಡಿ, ಸಮಿತಿಯಿಂದ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ.10ರ ಅಷ್ಟಮಿಯಂದು ಚಂಡಿಕಾ ಹೋಮ ಹಮ್ಮಿಕೊಳ್ಳಲಾಗಿದೆ. ಪುರಸಭಾ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸಮಿತಿಯ ಭದ್ರಿಸ್ವಾಮಿ, ಕೆ.ಪಿ.ಶ್ರೀನಿವಾಸ್, ಪುರಸಭೆ ಸದಸ್ಯ ಯತಿರಾಜ್, ಸೋಮೇಶ್ ಶಿವಮೊಗ್ಗೆ, ಎಚ್.ಆರ್. ದೇವರಾಜ್, ಕೆ.ಸಿ.ವಿಕಾಸ್, ಆಕಾಶ್, ಪಂಗ್ಲಿ ಮಂಜುನಾಥ್, ನಾಗೇಂದ್ರ ಅಗ್ನಿ, ಸಿದ್ದೇಶ್, ಕೆ.ಎಂ.ನೂತನ್, ರಂಗನಾಥ್, ಹುಲಿಕೆರೆ ಮಹೇಶ್, ನಲ್ಲೂರಿ ಸುರೇಶ್, ಪ್ರದೀಪ್, ಗೌತಮ್, ಮನು, ಮಾಲ್ತೇಶ್, ದಿಲೀಪ್, ಗಿರೀಶ್ ಇತರರಿದ್ದರು.