ಸಲ್ಮಾನ್​ ಖಾನ್​ ಜತೆ ನಟಿಸುವ ಆಫರ್​ ತಿರಸ್ಕರಿಸಿದ್ದ ಸ್ಟಾರ್​ ಕಿಡ್; ಆಕೆ ಈಗ ಬಿಟೌನ್​​​​​​​​ನಲ್ಲಿ ಟಾಪ್​​ ನಟಿ​​ | Salman Khan

1810.00_18_40_21.Still008
Published on

ಮುಂಬೈ: ಬಾಲಿವುಡ್​ ಭಾಯಿಜಾನ್​ ಸಲ್ಮಾನ್​ ಖಾನ್(Salman Khan) ಸಿನಿಮಾದ ಮೂಲಕ ಲಾಂಚ್​​ ಆಗಬೇಕೆಂದು ನಟನ ಜಗತ್ತಿಗೆ ಬರಲು ಇಚ್ಛಿಸುವ ನಟಿಯರು ಕನಸು ಕಾಣುತ್ತಾರೆ. ಸಲ್ಮಾನ್​ ಖಾನ್​​ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿಯರಲ್ಲಿ ಹಲವರು ಸ್ಟಾರ್​ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಆ ಯಶಸ್ವಿ ನಟಿಯರ ಸಾಲಿನಲ್ಲಿ ಭಾಗ್ಯಶ್ರಿ, ಸೋನಾಕ್ಷಿ ಸಿನ್ಹಾ, ಆಯೇಶಾ, ಜುಲ್ಕಾ, ರವೀನಾ ಟಂಡನ್​, ಸಾಯಿ ಮಂಜ್ರೇಕರ್ ಅವರನ್ನು ನೆನಪಿಸಿಕೊಳ್ಳಬಹುದು.

ಸಲ್ಮಾನ್​​ ಖಾನ್​​ ನಟನೆಯ ಸಿನಿಮಾದ ಮೂಲಕ ತಮ್ಮ ಚೊಚ್ಚಲ ಪ್ರವೇಶಕ್ಕೆ ಆಫರ್​ ನೀಡಿದ್ದರೂ ಸ್ಟಾರ್​ ಕಿಡ್​​ ನಟಿಯೊಬ್ಬರು ನಿರಾಕರಿಸಿದ್ದರು. ಐದು ವರ್ಷಗಳ ಬಳಿಕ ಬಾಲಿವುಡ್​​​​ಗೆ ಎಂಟ್ರಿಕೊಟ್ಟರು. ಆ ನಟಿ ಬೇರೆ ಯಾರು ಅಲ್ಲ ಶಕ್ತಿ ಕಪೂರ್​​​ ಅವರ ಮಗಳು ಶ್ರದ್ಧಾ ಕಪೂರ್. ಈ ವಿಚಾರವನ್ನು ನಟಿ ಶ್ರದ್ಧಾ ಕಪೂರ್​ ಸಂದರ್ಶನವೊಂದರಲ್ಲಿ ಸ್ವತಃ ಬಹಿರಂಗಪಡಿಸಿದ್ದು ಅದಕ್ಕೆ ಸ್ಪಷ್ಟಿಕರಣವನ್ನು ಕೊಟ್ಟಿದ್ದಾರೆ.

16ನೇ ವಯಸ್ಸಿನಲ್ಲಿದ್ದಾಗಲೇ ಶ್ರದ್ಧಾ ಕಪೂರ್ ಅವರಿಗೆ ಸಲ್ಮಾನ್ ಖಾನ್ ಅಭಿನಯದ ‘ಲಕ್ಕಿ: ನೋ ಟೈಮ್ ಫಾರ್ ಲವ್’ ಸಿನಿಮಾದಲ್ಲಿನ ಪ್ರಮುಖ ಪಾತ್ರಕ್ಕೆ ಆಫರ್​ ನೀಡಲಾಗಿತ್ತು. ಆದರೆ ಶ್ರದ್ಧಾ ತಿರಸ್ಕರಿಸಿದ್ದರಿಂದ ಆ ಪಾತ್ರ ಸ್ನೇಹಾ ಉಳ್ಳಾಲ್ ಅವರ ಪಾಲಾಯಿತು.

15 ಅಥವಾ 16ನೇ ವಯಸ್ಸಿನಲ್ಲಿ ನಾನು ತುಂಬಾ ಚಿಕ್ಕವಳಿದ್ದೆ. ಶಾಲಾ ಶಿಕ್ಷಣವನ್ನು ಮುಗಿಸಲು ಮತ್ತು ಕಾಲೇಜಿಗೆ ಸೇರಲು ಬಯಸುತ್ತಿದ್ದೆ. ಆ ಸಮಯದಲ್ಲಿ ಆಫರ್‌ಗಳನ್ನು ಪಡೆಯುವುದು ನನ್ನ ಯಶಸ್ಸಿನ ವ್ಯಾಖ್ಯಾನ ಎಂದ ನಾನು ಭಾವಿಸಿರಲಿಲ್ಲ. ಆದ್ದರಿಂದ ನಾನು ಸಲ್ಮಾನ್​ ಖಾನ್​ ಅವರೊಂದಿಗೆ ನಟಿಸಲು ಅವಕಾಶ ಸಿಕ್ಕಿದ್ದರೂ ಅದನ್ನು ತಿರಸ್ಕರಿಸಿದೆ. ಅಧ್ಯಯನದತ್ತ ಗಮನ ಹರಿಸುವುದು ಕಷ್ಟಕರವಾಗಿತ್ತು ಏಕೆಂದರೆ ಇದು ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವ ಅದ್ಭುತ ಅವಕಾಶವಾಗಿತ್ತು ಎಂದು ಶ್ರದ್ಧಾ ಕಪೂರ್​ ತಿಳಿಸಿದರು.

2005ರಲ್ಲಿ ಸಲ್ಮಾನ್​ ಖಾನ್​ ಅವರೊಂದಿಗೆ ನಟಿಸುವ ಅವಕಾಶವನ್ನು ತಿರಸ್ಕರಿಸಿದ ಬಳಿಕ 2010ರಲ್ಲಿ ತೀನ್ ಪಟ್ಟಿ ಚಿತ್ರದೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಆದಿತ್ಯ ರಾಯ್​ ಕಪೂರ್​​ ಜತೆಗಿನ ರೊಮ್ಯಾಂಟಿಕ್ ಮ್ಯೂಸಿಕಲ್ ಆಶಿಕಿ 2 ಸಿನಿಮಾ ಅವರ ವೃತ್ತಿಜೀವನದಲ್ಲಿ ಬ್ರೇಕ್​ ನೀಡಿತು. ​​​​​​​ಸದ್ಯ ಶ್ರದ್ಧಾ ಕಪೂರ್ ತಮ್ಮ ಸ್ತ್ರೀ-2 ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಆಗಸ್ಟ್ 15ರಂದು ಬಿಡುಗಡೆಯಾದ ಅವರ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net