

ಲಂಡನ್: ಪತ್ನಿಯು ಶೌಚಗೃಹದಿಂದ ಸ್ನಾನ ಮುಗಿಸಿ ಬರುವಷ್ಟರಲ್ಲಿ ತನ್ನಿಬ್ಬರು ಮಕ್ಕಳನ್ನು ಪಾಪಿ ತಂದೆಯೊಬ್ಬ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೂರದ ಲಂಡನ್ನಲ್ಲಿ ನಡೆದಿದ್ದು, ಘಟನೆ ಸಂಬಂಧ ವಿಚಾರಣೆ ಇಂದು ನಡೆದಿದೆ.
ನಾದರಾಜ ನಿಥಿಯಾಕುಮಾರ್ (40) ಮಕ್ಕಳನ್ನೇ ಕೊಲೆಗೈದ ಆರೋಪಿ. ಈತ ಅಂಗಡಿಯೊಂದರ ಮಾಲೀಕನಾಗಿದ್ದು, ಮೂರು ವರ್ದಷ ಗಂಡು ಮಗು ನಿಗಿಶ್ ನಿಥಿಯಾಕುಮಾರ್ ಹಾಗೂ 19 ತಿಂಗಳ ಹೆಣ್ಣು ಮಗು ಪವಿನ್ಯಾ ನಿಥಿಯಾಕುಮಾರ್ರನ್ನು ಬರ್ಬರವಾಗಿ ಕೊಂದಿದ್ದಾನೆ. ಪೂರ್ವ ಲಂಡನ್ನ ಇಲ್ಫೋರ್ಡ್ನಲ್ಲಿರುವ ನಿವಾಸದಲ್ಲಿ ಈ ಘಟನೆ ನಡೆದಿದೆ.
ಏಪ್ರಿಲ್ 26 ಸಂಜೆ 6 ಗಂಟೆಗೆ ಘಟನೆ ನಡೆದಿದ್ದು, ಮಗು ಪವಿನ್ಯಾ ಘಟನಾ ಸ್ಥಳದಲ್ಲೇ ಮೃತಪಟ್ಟರೆ, ನಿಗಿಶ್ ಘಟನೆ ನಡೆದ ಎರಡು ಗಂಟೆಯ ನಂತರ ರಾಯಲ್ ಲಂಡನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯಿತು. ಆರೋಪಿ ತಂದೆ ನಾದರಾಜ ಕೂಡ ಘಟನಾ ವೇಳೆ ಗಂಭೀರವಾಗಿ ಗಾಯಗೊಂಡಿದ್ದ.
ಲಂಡನ್ನ ಓಲ್ಡ್ ಬೈಲೆ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಆರೋಪಿಯ ವಿಚಾರಣೆ ಇಂದು ನಡೆದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಜುಲೈ 28ಕ್ಕೆ ವಿಚಾರಣೆ ಮುಂದೂಡಿದ್ದಾರೆ. ಈವರೆಗೂ ಕೊಲೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ತನಿಖೆ ಜತೆಗೆ ಆರೋಪಿಯ ವಿಚಾರಣೆಯು ನಡೆಯುತ್ತಿದೆ. (ಏಜೆನ್ಸೀಸ್)