

ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ದಿನವೂ ವಿವಿಧ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿ್ತ್ದಾರೆ. ಅಮೆರಿಕದ ನೀತಿ ನಿರ್ಣಯಗಳು ಜಾಗತಿಕವಾಗಿ ಪರಿಣಾಮ ಬೀರುವುದರಿಂದ ಸಹಜವಾಗಿಯೇ ಟ್ರಂಪ್ ನಡೆಗಳ ಬಗ್ಗೆ ವಿಶ್ವಾದ್ಯಂತ ಚರ್ಚೆಗಳು ನಡೆಯುತ್ತಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ರಂಪ್ ನಡುವೆ ಉತ್ತಮ ಸ್ನೇಹ ಬಾಂಧವ್ಯ ಇದ್ದರೂ, ಭಾರತದ ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ವಿಧಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಇದಲ್ಲದೆ, ಅಕ್ರಮ ವಲಸಿಗರು ಹಾಗೂ ವೀಸಾ ವಿಚಾರವಾಗಿ ಟ್ರಂಪ್ ಕ್ರಮಗಳು ಭಾರತಕ್ಕೆ ಕೆಲಮಟ್ಟಿಗೆ ಪ್ರತಿಕೂಲವಾಗುವ ಸೂಚನೆಗಳು ಸಿಗತೊಡಗಿವೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಾಗತಿಕ ರಾಜತಾಂತ್ರಿಕ ವ್ಯವಹಾರಗಳಲ್ಲಿ ಪಳಗಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಸರ್ಕಾರದ ಇತರ ಪ್ರಮುಖರು ಭಾರತದ ಹಿತಾಸಕ್ತಿ ಕಾಪಾಡಲು ಯಾವ ರೀತಿಯ ಹೆಜ್ಜೆಗಳನ್ನು ಇಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಇದು ಒಂದೆಡೆಯಾದರೆ, ಅತ್ತ ಪಾಕಿಸ್ತಾನ ಟ್ರಂಪ್ ಪುನರಾಗಮನದ ನಂತರ ದೊಡ್ಡ ಸಂಕಟಕ್ಕೆ ಈಡಾಗಿದೆ. ಮರುಮೌಲ್ಯಮಾಪನದ ಉದ್ದೇಶದಿಂದ, ವಿದೇಶಗಳಿಗೆ ನೀಡುತ್ತಿರುವ ಆರ್ಥಿಕ ನೆರವಿಗೆ ಟ್ರಂಪ್ ತಾತ್ಕಾಲಿಕ ತಡೆಹಾಕಿದ್ದಾರೆ. ಈ ನಡೆಯಿಂದ ಹೆಚ್ಚು ಅಪಾಯ ಎದುರಾಗಿರುವುದು ಪಾಕಿಸ್ತಾನಕ್ಕೆ. ಅಮೆರಿಕದ ನೆರವು ಇಲ್ಲದೆ ಕೃಷಿ, ಆರೋಗ್ಯ, ಶಿಕ್ಷ ಇತ್ಯಾದಿ ಕ್ಷೇತ್ರಗಳಿಗೆ ಸಮಸ್ಯೆಯಾಗಿದೆ. ಐದು ವಿದ್ಯುತ್ ಯೋಜನೆಗಳು ಸ್ಥಗಿತವಾಗಿವೆ.
ಮೊದಲ ಬಾರಿಗೆ ಟ್ರಂಪ್ ಅಧ್ಯಕ್ಷರಾಗಿದ್ದಾಗ, ಭಯೋತ್ಪಾದನೆಯ ನಿಗ್ರಹದ ಹೆಸರಿನಲ್ಲಿ ಅಮೆರಿಕದಿಂದ ಪಾಕಿಸ್ತಾನ 35 ಬಿಲಿಯನ್ ಡಾಲರ್ಗಳನ್ನು ಪಡೆದುಕೊಂಡಿದೆ. ಆದರೆ ಅದಕ್ಕೆ ಪ್ರತಿಯಾಗಿ ಮೋಸಮಾಡಿದೆ ಎಂದು ಗುಡುಗಿದರಲ್ಲದೆ, 2018ರ ಜನವರಿ 1ರಂದು ಪಾಕಿಸ್ತಾನಕ್ಕೆ ನೀಡುತ್ತಿದ್ದ ಧನಸಹಾಯದಲ್ಲಿ ಶೇ. 90ರಷ್ಟನ್ನು ಕಡಿತಮಾಡಿದರು. ಇದರಿಂದ ಪಾಕ್ ಮತ್ತಷ್ಟು ತೊಂದರೆ ಎದುರಿಸುವಂತಾಯಿತು. ಆದರೆ ಮೊದಲಿಂದಲೂ ಪಾಕಿಸ್ತಾನದ ಬೆಂಬಲಿಗರಾಗಿರುವ ಜೋ ಬೈಡೆನ್ ಅಧ್ಯಕ್ಷರಾದ ನಂತರ ಪಾಕಿಸ್ತಾನಕ್ಕೆ ಎಲ್ಲ ಬಗೆಯ ನೆರವನ್ನೂ ಪುನರಾರಂಭಿಸಿದರು. ‘ಅಮೆರಿಕ ಮೊದಲು’ ಎಂಬ ಮಂತ್ರ ಪಠಿಸುತ್ತಿರುವ ಟ್ರಂಪ್ ಮತ್ತೆ ಅಧ್ಯಕ್ಷರಾದ ಬಳಿಕ ಜಾಗತಿಕ ಸಮೀಕರಣಗಳು ಬದಲಾಗುತ್ತಿವೆ. ಅಮೆರಿಕ ತನ್ನ ಹಿತಾಸಕ್ತಿಗಳ ಉದ್ದೇಶದಿಂದ ಜಗತ್ತಿನ ವಿವಿಧ ದೇಶಗಳಿಗೆ ಅಪಾರ ಪ್ರಮಾಣದ ಹಣವನ್ನು ದಾನವಾಗಿ ನೀಡುತ್ತಿದೆ. ಈ ಹಣಕ್ಕೆ ಟ್ರಂಪ್ ಈಗ ತಡೆಹಾಕಿದ್ದಾರೆ. ಯೂಕ್ರೇನ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಗೆ ಇದರಿಂದ ಹೆಚ್ಚು ನಷ್ಟವಾಗಿದೆ. ಸಂಪದ್ಭರಿತ ನೆಲ ಹೊಂದಿದ್ದರೂ, ಭಾರತದ ಮೇಲೆ ಹಗೆಸಾಧಿಸುವುದನ್ನೇ ಕೆಲಸವನ್ನಾಗಿಸಿಕೊಂಡ ಪಾಕ್ ನಾಯಕರಿಂದಾಗಿ ಆ ದೇಶ ಇಂದು ಆರ್ಥಿಕವಾಗಿ ದಿವಾಳಿಯಾಗುವ ಹಂತಕ್ಕೆ ತಲುಪಿದೆ. ಅಮೆರಿಕದ ನೆರವು ಕಡಿತ ಇನ್ನಷ್ಟು ಹೊಡೆತ ನೀಡಿದೆ. ಅಲ್ಲಿನ ನಾಯಕರು ಇತಿಹಾಸದಿಂದ ಪಾಠ ಕಲಿಯುವುದಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.