

ಬೆಂಗಳೂರು: ಸ್ಯಾಂಡಲ್ವುಡ್ನ ದಿ ಮೋಸ್ಟ್ ಬ್ಯುಸಿಯೆಸ್ಟ್ ನಟ ಎಂದರೆ ಮೊದಲಿಗೆ ಕೇಳಿ ಬರುವ ಹೆಸರು ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ ಅವರದ್ದು, ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ದಿನ ನಟ ಇದೀಗ ಶೂಟಿಂಗ್ಗೆ ವಾಪಸ್ ಆಗಿದ್ದು, ಇವರಿಗೆ ಭರ್ಜರಿ ಸ್ವಾಗತ ದೊರೆತಿದೆ. ಉತ್ತರಕಾಂಡ ಸಿನಿಮಾ ತಂಡದವರು ಶಿವರಾಜ್ಕುಮಾರ್ಗೆ ಭರ್ಜರಿ ಸ್ವಾಗತ ನೀಡಿದ್ದು, ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿರುವ ಉತ್ತರಕಾಂಡ ಸಿನಿಮಾದಲ್ಲಿ ಕಲಾವಿದರ ದೊಡ್ಡ ದಂಡೇ ಇದೆ ಎಂದು ಹೇಳಬಹುದಾಗಿದೆ. ದಿನ ಕಳೆದಂತೆ ಸ್ಟಾರ್ ನಟರು ಚಿತ್ರತಂಡವನ್ನು ಕೂಡಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್ಕುಮಾರ್, ಧನಂಜಯ್ ಜೊತೆಗೆ ಐಶ್ವರ್ಯಾ ರಾಜೇಶ್, ರಂಗಾಯಣ ರಘು, ಯೋಗರಾಜ್ ಭಟ್, ಚೈತ್ರಾ ಆಚಾರ, ದಿಗಂತ್ ಮೊದಲಾದವರು ನಟಿಸುತ್ತಿದ್ದಾರೆ. ಇದೀಗ ಈ ಚಿತ್ರದ ಸೆಟ್ಗೆ ಶಿವಣ್ಣ ಎಂಟ್ರಿ ಕೊಟ್ಟಿದ್ದು, ಅದ್ದೂರಿ ಸ್ವಾಗತ ಸಿಕ್ಕಿದೆ.
ಉತ್ತರಕಾಂಡ ಸೆಟ್ಗೆ ಶಿವಣ್ಣ ಎಂಟ್ರಿ ಕೊಡುತ್ತಿದ್ದಂತೆ ಚಿತ್ರತಂಡ ತಮಟೆ ವಾದ್ಯಗಳನ್ನು ಬಾರಿಸಿ ಅವರ ಮುಖವಾಡಗಳನ್ನು ಧರಿಸಿ ಹಾರ ಹಾಕಿ ಸ್ವಾಗತ ಕೋರಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದಲ್ಲದೆ ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ನಟಿಸುತ್ತಿದ್ದು, ಇತ್ತೀಚಿಗೆ ಚಿತ್ರತಂಡ ಅವರ ಪೋಸ್ಟರ್ ರಿವೀಲ್ ಮಾಡಿತ್ತು.
ನಿರ್ಮಾಪಕರಾದ ಕಾರ್ತಿಕ್ ಗೌಡ, ಯೋಗಿ ಜಿ. ರಾಜ್ ಹಾಗೂ ನಟ ಡಾಲಿ ಧನಂಜಯ್ ಅವರು ‘ರತ್ನನ್ ಪ್ರಪಂಚ’ ಹಾಗೂ ‘ಗುರುದೇವ ಹೊಯ್ಸಳ’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಇವರ ಕಾಂಬಿನೇಷನ್ನಲ್ಲಿ ‘ಉತ್ತರಕಾಂಡ’ ಸಿನಿಮಾ ಮೂಡಿಬರುತ್ತಿದೆ. ರೋಹಿತ್ ಪದಕಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ ಸಂಯೋಜನೆ, ಸ್ವಾಮಿ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಇದೆ. ಈಗಾಗಲೇ ಟೈಟಲ್ ಹಾಗೂ ಮೇಕಿಂಗ್ ಮೂಲಕ ಸಾಕಷ್ಟು ಗಮನ ಸೆಳೆದಿರುವ ಚಿತ್ರ ಬಿಡುಗಡೆಯನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.