

ಬಾಗಲಕೋಟೆ: ಲೋಕಸಭಾ ಚುನಾವಣೆ 2024ರ ಕದನ ರಂಗೇರುತ್ತಿದ್ದು, ಆಯಾ ಪಕ್ಷಗಳಲ್ಲಿ ತಯಾರಿ ಭರ್ಜರಿಯಿಂದ ಸಾಗುತ್ತಿದೆ. ಈ ಮಧ್ಯೆ ಈಗಾಗಲೇ ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಘೋಷಿಸಿದ್ದು, ಉಳಿದ ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದು ಮಾತ್ರ ಬಾಕಿ ಉಳಿದಿದೆ.
ಇನ್ನು ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದು, ದ್ವಿತೀಯ ಪಟ್ಟಿ ಪ್ರಕಟಿಸಬೇಕಿದೆ. ಇದರ ಬೆನ್ನಲ್ಲೇ 'ಕೈ' ಟಿಕೆಟ್ ಆಕಾಂಕ್ಷಿಯಾಗಿರುವ ಸಚಿವ ಶಿವಾನಂದ ಪಾಟೀಲ ಪುತ್ರಿ ಇದೀಗ ದೇವರ ಮೊರೆ ಹೋಗಿರುವುದು ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ಗಾಗಿ ದೇವರ ಮೊರೆ ಹೋಗಿರುವ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ , ಇಂದು ಬಾಗಲಕೋಟೆಯ ಬಾದಾಮಿಯ ಬನಶಂಕರಿ ದೇಗುಲಕ್ಕೆ ಭೇಟಿ ನೀಡಿದರು. ಶಕ್ತಿಪೀಠ ಬನಶಂಕರಿ ದೇವಾಲಯಕ್ಕೆ ಆಗಮಿಸಿ,
ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ವಿಜಯಪುರ ಜಿಲ್ಲೆಯ ಸಂಯುಕ್ತಾ ಪಾಟೀಲ, ಬಾಗಲಕೋಟೆ ಲೋಕಸಭೆ ಕಾಂಗ್ರೆಸ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸದ್ಯ ಆಕಾಂಕ್ಷಿಗಳ ರೇಸ್ನಲ್ಲಿ ಪ್ರಬಲವಾಗ್ತಿದೆ ಸಂಯುಕ್ತಾ ಪಾಟೀಲ ಹೆಸರು. ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಆಗಿರುವ ಸಂಯುಕ್ತಾ, ಕುಟುಂಬ ಸಮೇತ ಬನಶಂಕರಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ಟಿಕೆಟ್ ಆಕಾಂಕ್ಷಿಗಳಾದ ಅಜಯಕುಮಾರ ಸರನಾಯಕ, ವೀಣಾ ಕಾಶಪ್ಪನವರ್, ಆನಂದ ನ್ಯಾಮಗೌಡರ ಹೆಸರಿನ ಜತೆ ಸಂಯುಕ್ತಾ ಹೆಸರು ಕೂಡ ಈಗ ಮುಂಚೂಣಿಯಲ್ಲಿದೆ.