ಲಿಂಗದೇವರಕೊಪ್ಪಲಿನಲ್ಲಿ ಹೊನಲು ಬೆಳಕಿನ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ

24
Published on

ಮೈಸೂರು: ಕ್ರೀಡೆ ಮನುಷ್ಯನನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿರಲು ಸಹಕಾರಿಯಾಗಿದ್ದು, ಎಲ್ಲ ಯುವಕರು ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಎಸ್.ಕರೀಗೌಡ ತಿಳಿಸಿದರು.
ಮೈಸೂರು ತಾಲೂಕು ಲಿಂಗದೇವರಕೊಪ್ಪಲಿನಲ್ಲಿ ಜೋಡಿ ಮಾರಮ್ಮನ ಹಬ್ಬದ ಅಂಗವಾಗಿ ಕನಕ ಗ್ರೂಪ್‌ನಿಂದ ಸೋಮವಾರ ಆಯೋಜಿಸಿದ್ದ 2ನೇ ವರ್ಷದ ಹೊನಲು ಬೆಳಕಿನ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಯುವಕರು ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿ ಚಟುವಟಿಕೆಯಿಂದ ಇರುವುದು ಸಂತೋಷದ ವಿಷಯವಾಗಿದೆ. ಕ್ರೀಡೆಯಲ್ಲಿ ಸೋಲು, ಗೆಲುವನ್ನು ಎಲ್ಲರೂ ಸಮನಾಂತರವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವದಿಂದ ಆಟ ಆಡಬೇಕು ಎಂದ ಅವರು ವಿಜೇತ ತಂಡಗಳಿಗೆ ಅಭಿನಂದನೆ ಸಲ್ಲಿಸಿದರು.
ಮಿನಿ ಕ್ರಿಕೆಟ್ ಪಂದ್ಯಾವಳಿಯಲ್ಲಿ 32 ತಂಡಗಳು ಭಾಗವಹಿಸಿದ್ದವು. ವಿಜೇತ ತಂಡಕ್ಕೆ ಕ್ರಮವಾಗಿ ಎಲ್.ಡಿ.ಕೆ. ಲಯನ್ಸ್ ತಂಡ ಪ್ರಥಮ ಬಹುಮಾನ ನಗದು 20 ಸಾವಿರ ರೂ. ಮತ್ತು ಟ್ರೋಫಿಯನ್ನು ಕ್ಯಾಪ್ಟನ್ ಪುಟ್ಟ ಪಡೆದುಕೊಂಡರೆ, ಎಸಿಟಿ ತಂಡ ದ್ವಿತೀಯ ಬಹುಮಾನದೊಂದಿಗೆ 10 ಸಾವಿರ ರೂ. ನಗದು ಮತ್ತು ಟ್ರೋಫಿ ಹಾಗೂ ಕನಕ ಗ್ರೂಪ್ ತೃತೀಯ ಬಹುಮಾನವಾಗಿ 5 ಸಾವಿರ ರೂ.ನಗದು ಟ್ರೋಫಿ ಲಭಿಸಿದೆ.
ಕೆ.ಆರ್.ನಗರದ ಶಾಸಕ ಡಿ.ರವಿಶಂಕರ್, ಗೋಪಾಲಗೌಡ ಆಸ್ಪತ್ರೆಯ ನ್ಯೂರೋಜೋನ್ ಮುಖ್ಯಸ್ಥ ಡಾ.ಶುಶ್ರೂತ್‌ಗೌಡ, ಜಿ.ಪಂ.ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ, ಮುಖಂಡರಾದ ಸೆಂಟ್ರಿಂಗ್ ರವಿಕುಮಾರ್, ಕನ್ನೇಗೌಡ, ಪೈಲ್ವಾನ್ ಕುಮಾರ್, ಟೈಲರ್ ರಮೇಶ್, ಮಂಜು, ನಾಗರಾಜು, ಕೆ.ಆರ್.ಪೇಟೆ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದರಾಜು, ಪಂದ್ಯಾವಳಿಯ ಆಯೋಜಕರಾದ ದರ್ಶನ್, ಮಂಜು, ಮಹೇಶ್, ರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net