

ಸಾಗರ: ಮೂರು ವರ್ಷದಿಂದ ವಂಶವಾಹಿನಿ ನಡೆಸುತ್ತ ಬಂದ ಸರಣಿ ತಾಳಮದ್ದಲೆ ಹೆಚ್ಚು ಪ್ರದರ್ಶನಗಳು ನಿಗದಿತ ಎರಡು ಗಂಟೆಗೆ ಸರಿಯಾಗಿ ಮುಕ್ತಾಯ ಆಗಿರುವುದು ಯಕ್ಷಗಾನ ತಾಳಮದ್ದಲೆಯಲ್ಲಿ ಹೊಸ ಪ್ರಯತ್ನ ಎಂದು ಭಾಗವತ, ಸಾಹಿತಿ ಸುಜನ್ ಗಣೇಶ್ ಹೆಗಡೆ ಹೇಳಿದರು.
ಶ್ರೀ ರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷಮೇಳದಿಂದ ಸಾಗರದಲ್ಲಿ ಏರ್ಪಡಿಸಿದ್ದ ವಿಜಯ ಸರಣಿ ತಾಳಮದ್ದಲೆ ಕಾರ್ಯಕ್ರಮದಲ್ಲಿ ಮಾತನಾಡಿ, ಪೌರಾಣಿಕ ಚೌಕಟ್ಟಿನ ಹೊಸ ಕತೆಗಳನ್ನು ಸಹೃದಯರಿಗೆ ತಲುಪಿಸುವ ಜತೆಗೆ ನಿಶ್ಚಿತ ಸಮಯದಲ್ಲಿ ಅದನ್ನು ಯಾವುದೇ ಪೂರ್ವತಯಾರಿ ಇಲ್ಲದೆ ನಿರಂತರ ಸಾಧ್ಯವಾಗಿಸಿರುವುದು ನಿಜಕ್ಕೂ ವಿಶೇಷಗಳಲ್ಲಿ ವಿಶೇಷ ಎಂದರು.
ಬರಹಗಾರ ಜಯಪ್ರಕಾಶ್ ತಲವಾಟ ಮಾತನಾಡಿ, ಹಠಕ್ಕೆ ಬಿದ್ದವರಂತೆ ಪ್ರಸಂಗ ರಚನೆ ಕಾರ್ಯದ ಜತೆಗೆ ಅದರ ಪ್ರಯೋಗವನ್ನು ಯಶಸ್ವಿಗೊಳಿಸುತ್ತಿರುವ ವಂಶವಾಹಿನಿ ಯಕ್ಷಗಾನ ಸೇವೆ ಶ್ಲಾಘನೀಯ ಎಂದು ಹೇಳಿದರು.
ರಮೇಶ್ ಹೆಗಡೆ ಗುಂಡೂಮನೆ ವಿರಚಿತ ನಂದಿನಿ ವಿಜಯ ಪ್ರಸಂಗದ ತಾಳಮದ್ದಲೆ ನಡೆಯಿತು. ಕಲಾವಿದ ಮಂಜುನಾಥ್ ಗುಡ್ಡೆದಿಂಬ, ಸೂರ್ಯನಾರಾಯಣ, ಶ್ರೀವತ್ಸ, ಅರುಣ, ರವಿಶಂಕರ ಭಟ್, ಅಶೋಕಕುಮಾರ್, ರಮೇಶ್ ಹೆಗಡೆ ಇತರರಿದ್ದರು.