

ತೀರ್ಥಹಳ್ಳಿ: ನೆಲದ ಮೇಲೆ ಆಸೆ ಇದ್ದವರು ಸಮಾಜವಾದಿಗಳಾಗಲು ಸಾಧ್ಯವಿಲ್ಲ. ಹಿಂದಿನ ರಾಜಕಾರಣಿಗಳಿಗೆ ಬದ್ಧತೆ, ಪ್ರಬುದ್ಧತೆ ಇತ್ತು. ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರು ಆ ಸಾಲಿಗೆ ಸೇರಿದವರು ಎಂದು ಸಾಹಿತಿ ಡಾ. ಶ್ರೀಪತಿ ಹಳಗುಂದ ಹೇಳಿದರು.
ಕೋಣಂದೂರು ರೋಟರಿ ಭವನದಲ್ಲಿ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ.ಪಿ.ಶ್ರೀಕಾಂತ್ ಸಂಪಾದಕತ್ವದ ಸಮಾಜವಾದಿ ಕೋಣಂದೂರು ಲಿಂಗಪ್ಪ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಅಂದಿನ ರಾಜಕಾರಣದಲ್ಲಿ ಈ ನೆಲದ ಕಟ್ಟಕಡೆಯ ಸಮುದಾಯದ ಬಗ್ಗೆ ಆಳವಾದ ಜ್ಞಾನ ಮತ್ತು ಕಾಳಜಿ ಇರುತ್ತಿತ್ತು. ಲಿಂಗಪ್ಪ ಅವರು ಸಾಹಿತಿಯೂ ಆಗಿದ್ದು, ಕನ್ನಡಪರ ಹೋರಾಟಗಾರರಾಗಿ ಬಹುಮುಖ ಪ್ರತಿಭೆ ಹೊಂದಿದ್ದರು ಎಂದು ತಿಳಿಸಿದರು.
ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಅಂದಿನ ಸಮಾಜವಾದಿಗಳು ಸಿದ್ಧಾಂತದೊಂದಿಗೆ ಅದ್ಭುತ ಜ್ಞಾನವನ್ನೂ ಹೊಂದಿದ್ದರು. ನುಡಿದಂತೆ ನಡೆದ ಕೋಣಂದೂರು ಲಿಂಗಪ್ಪ ಅವರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಇವರ ಬದುಕು ಸರಳತೆ ಮತ್ತು ಪ್ರಾಮಾಣಿಕ ಜೀವನ ಕ್ರಮವನ್ನು ಕೃತಿಯಲ್ಲಿ ಕಟ್ಟಿಕೊಡಲಾಗಿದೆ ಎಂದರು.
ಮಾಜಿ ಶಾಸಕ ಬಿ.ಸ್ವಾಮಿರಾವ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಲಿಂಗಪ್ಪ ಅವರು ಸ್ವಚ್ಛ ರಾಜಕಾರಣಿ. ಮಾತ್ರವಲ್ಲದೆ ಉತ್ತಮ ವಾಗ್ಮಿ ಆಗಿದ್ದರು ಎಂದು ಲಿಂಗಪ್ಪ ಅವರ ಜತೆಗಿನ ಓಡನಾಟದ ದಿನಗಳನ್ನು ಸ್ಮರಿಸಿದರು.
ಕೋಣಂದೂರು ಲಿಂಗಪ್ಪ ದಂಪತಿಯನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಾ ವಾಸುದೇವ, ಕೆ.ಆರ್.ಸದಾಶಿವ, ಸದಸ್ಯರಾದ ಎಚ್.ಎಂ.ಸುರೇಶ್, ಬಿ.ಟಿ.ಈಶ್ವರಪ್ಪ, ಡಿ.ಆರ್.ಗಿರೀಶ್, ಸಂದೇಶ್‌ಕುಮಾರ್ ಇತರರಿದ್ದರು.