

ಸಾಗರ: ಸರ್ಕಾರ ಮಹತ್ತರ ಉದ್ದೇಶದಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು, ತಾಲೂಕಿನಲ್ಲಿ ಶೇ. 98ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ನೆಹರು ಮೈದಾನದಲ್ಲಿ ಶಿಕ್ಷಣ ಇಲಾಖೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕೆಲವೆಡೆ ಮಾಹಿತಿ ಸಂಗ್ರಹಕ್ಕೆ ಬಂದ ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಸಾಧ್ಯವಾದರೆ ಮಾಹಿತಿ ಕೊಡಿ, ಇಲ್ಲವಾದಲ್ಲಿ ತಿರಸ್ಕಾರ ಮಾಡಿ ಎಂದರು.
ಮಕ್ಕಳು ಕ್ರೀಡೆಯಲ್ಲಿ ಸ್ಫೂರ್ತಿಯಿಂದ ಪಾಲ್ಗೊಳ್ಳಬೇಕು. ನೆಹರು ಮೈದಾನದಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು ನಡೆಯುತ್ತಿವೆ. ಸುಸಜ್ಜಿತ ವೇದಿಕೆ, ಶೌಚಗೃಹ, ಡ್ರೆಸ್ಸಿಂಗ್ ರೂಂ ನಿರ್ಮಾಣಕ್ಕೆ 40 ಲಕ್ಷ ರೂ., ಮೈದಾನದ ಸುತ್ತ ಫೆನ್ಸಿಂಗ್ ನಿರ್ಮಾಣಕ್ಕೆ 20 ಲಕ್ಷ ರೂ. ಮೀಸಲಿರಿಸಿದ್ದು, ಅ.18ಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಹೊಸನಗರದ ಕ್ರೀಡಾಂಗಣ ಅಭಿವೃದ್ಧಿಗೂ ನೆರವು ಒದಗಿಸಲಾಗಿದೆ. ಮಕ್ಕಳು ತಾಲೂಕು ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ, ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಾಲತೇಶ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳೂ ಮುಖ್ಯ. ಮಕ್ಕಳಿಗೆ ಓದಿನಲ್ಲಿ ಶ್ರದ್ಧೆ ಇರಬೇಕು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಆಸಕ್ತಿ ಹೊಂದಿರಬೇಕು ಎಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಗಣಪತಿ ಮಂಡಗಳಲೆ, ಮಧುಮಾಲತಿ, ಸೈಯದ್ ಜಾಕೀರ್, ಇ.ಪರಶುರಾಮಪ್ಪ, ಭೂಮೇಶ್, ರಮೇಶ್, ಬಿ.ಎಲ್.ಶಿವಪ್ರಕಾಶ್, ಚಂದ್ರಪ್ಪ, ಪಾರ್ವತಮ್ಮ, ರಾಜಶೇಖರ ಶೆಟ್ಟಿ, ಡಾ. ಅನ್ನಪೂರ್ಣಾ, ಎಂ.ವೈ.ಮೂರ್ತಿ, ದಿನೇಶ್, ಯಶೋಧರ ಇತರರಿದ್ದರು.