

ಆಯನೂರು: ನಟ ಪುನೀತ್ ರಾಜ್‌ಕುಮಾರ್ ಜನ್ಮದಿನದ ಅಂಗವಾಗಿ ಬೆಂಗಳೂರಿನ ಸಹೃದಯಿ ಕನ್ನಡಿಗರು ತಂಡದಿಂದ ಆಯನೂರಿನ ಹಾರನಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ಹಚ್ಚಲಾಯಿತು. ಬಳಿಕ ಮುದ್ದಿನಕೊಪ್ಪ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್, ಪೆನ್ಸಿಲ್ ಹಾಗೂ ಬ್ಯಾಗ್ ವಿತರಿಸಲಾಯಿತು.
ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯಲು ಸಹೃದಯಿ ಕನ್ನಡಿಗರು ತಂಡಕ್ಕೆ ಶಿವಮೊಗ್ಗ ಪೆಸಿಟ್ ಕಾಲೇಜು ವಿದ್ಯಾರ್ಥಿಗಳು ಸಹಕಾರ ನೀಡಿದರು. ಶಾಲಾ ಗೋಡೆಗಳ ಮೇಲೆ ಕಾರ್ಟೂನ್, ಮಿಕ್ಕಿ ಮೌಸ್, ಪರಿಸರ ಕಾಳಜಿ ಚಿತ್ರಗಳನ್ನು ರಚಿಸಲಾಯಿತು.
ಸಹೃದಯಿ ಕನ್ನಡಿಗರು ತಂಡದ ಕೆ.ಭಾಸ್ಕರ್ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಅಧ್ಯಯನ ನಡೆಸುವ ಸರ್ಕಾರಿ ಶಾಲೆಗಳಿಗೆ ಮೌಲ ಸೌಕರ್ಯ ಅತ್ಯಂತ ಅವಶ್ಯಕ. ನಮ್ಮ ತಂಡದಿಂದ ಆಯ್ದ ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವ ಸೇವೆ ಮಾಡಲಾಗುತ್ತಿದೆ ಎಂದರು.
ತಂಡದ ಸದಸ್ಯ ಚರಣ್‌ಕುಮಾರ್ ಮಾತನಾಡಿ, ರಾಜ್ಯದ ವಿವಿಧೆಡೆ ಉದ್ಯೋಗದಲ್ಲಿ ನಿರತರಾಗಿರುವ ಸಮಾನ ಮನಸ್ಕರು ಒಗ್ಗೂಡಿ ತಂಡ ರಚಿಸಿಕೊಂಡಿದ್ದು, 2023ರ ಡಿಸೆಂಬರ್‌ನಿಂದ 13 ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಆರ್.ವಿಜಯಾ, ರಘುಕುಮಾರ್, ನಿತಿನ್ ಗೌಡ, ಕೆ.ಎಂ.ಜಗದೀಶ್, ಎಂ.ರಾಜೇಶ್, ಹರೀಶ್, ಶಿಕ್ಷಕಿ ನಾಗಮಣಿ, ರಶ್ಮಿ, ಸಂತೋಷಕುಮಾರ್, ಮಧು, ಅವಿನಾಶ್, ವಿನಯ್‌ಕುಮಾರ್ ಇತರರಿದ್ದರು.