

ರಿಪ್ಪನ್ಪೇಟೆ: ಹೊಂಬುಜ ಜೈನಮಠದಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಏಕಶಿಲಾ ಜಿನಬಿಂಬಕ್ಕೆ ಭಕ್ತವೃಂದದವರು ಮಹಾಭಿಷೇಕ ನಡೆಸಿದರು.
ವಾರ್ಷಿಕ ಜಾತ್ರಾ ಮಹೋತ್ಸವದ ಪಂಚಮಿ ದಿನದಂದು ಹೊಂಬುಜದ ಗುಡ್ಡದ ಬಸದಿ ಎಂದೇ ಕರೆಯಲ್ಪಡುವ ತ್ರಿಕೂಟ ಜಿನಾಲಯದಲ್ಲಿ ಅಭಿಷೇಕ ನೆರವೇರಿಸಲಾಯಿತು. ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಪೂಜೆ, ಗಣಾಧಿಪತಿ ಗಣಧರಾಚಾರ್ಯ ಶ್ರೀ ಕುಂಥುಸಾಗರ ಮಹಾರಾಜರ ಸಸಂಘದ ಮುನಿಶ್ರೀಗಳು, ಆರ್ಯಿಕಾ ಅವರ ಸಾನ್ನಿಧ್ಯದಲ್ಲಿ ಶಾಸ್ತ್ರೋಕ್ತ ರೀತಿಯಲ್ಲಿ ವಿಧಿವಿಧಾನಗಳು ನಡೆದವು.
ಜಲ, ಹಾಲು, ಎಳನೀರು, ಇಕ್ಷುರಸ, ಕಲ್ಕಚೂರ್ಣ, ಕಷಾಯ, ಚಂದನ, ಅಷ್ಟಗಂಧ, ಕೇಸರಿ, ದ್ರವ್ಯಗಳಿಂದ ಅಭಿಷೇಕವನ್ನು ಭಕ್ತರು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಜಿನಭಜನೆ-ವಾದ್ಯಗೋಷ್ಠಿಯೊಂದಿಗೆ ನಡೆದ ಮಹಾಭಿಷೇಕ ಪುಷ್ಪಾರ್ಚನೆ, ಮಂಗಳಾರತಿಯೊಂದಿಗೆ ಸಂಪನ್ನಗೊಂಡಿತು. ಶ್ರೀ ಪಾರ್ಶ್ವನಾಥ ಕೀ ಜೈ, ಶ್ರೀ ಪದ್ಮಾವತಿ ಮಾತಾಕೀ ಜೈ, ಜೈನ ಧರ್ಮ ಕೀ ಜೈ ಎಂಬ ಘೋಷಣೆ ಕೇಳಿಬಂದವು.
ಶ್ರೀ ಬಾಹುಬಲಿ ಸ್ವಾಮಿ, ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಾಯಿತು. ತ್ರಿಕೂಟ ಜಿನಾಲಯದ ಶ್ರೀ ಪಾರ್ಶ್ವನಾಥ ಸ್ವಾಮಿ ಮಹಾಭಿಷೇಕದಿಂದ ಭಕ್ತರಿಗೆ ಅಧ್ಯಾತ್ಮ ಮನೋಧರ್ಮ ವೃದ್ಧಿಸುತ್ತದೆ ಎಂದು ದೇವೇಂದ್ರಕೀರ್ತಿ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು. ಕಂಬದಹಳ್ಳಿಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಕೊಲ್ಹಾಪುರದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು.