

ರಿಪ್ಪನ್‌ಪೇಟೆ: ಸಮಯ ಮತ್ತು ಶಿಸ್ತು ಪಾಲನೆಗೆ ಪ್ರಾಧ್ಯಾಪಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ ಹೇಳಿದರು.
ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹೊಸನಗರ ತಾಲೂಕು ಉಪನ್ಯಾಸಕರ ಸಂಘ ಹಾಗೂ ಪ್ರಾಚಾರ್ಯರ ಸಂಘಟನೆ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಉಪನ್ಯಾಸಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಹೆಚ್ಚು ಅಧ್ಯಯನ ಮಾಡುವುದರ ಮೂಲಕ ಹೊಸ ವಿಷಯಗಳನ್ನು ಅರಿತುಕೊಂಡು ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆ ಕುರಿತು ಉಪನ್ಯಾಸಕರು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕರು ಮಾಹಿತಿ ನೀಡಿದರು. ಶೇ. 100 ಫಲಿತಾಂಶ ಪಡೆದ ವಿಷಯವಾರು ಉಪನ್ಯಾಸಕರಿಗೆ ಸನ್ಮಾನಿಸಲಾಯಿತು.
ಅಮೃತ ಕಾಲೇಜಿನ ಪ್ರಾಚಾರ್ಯ ಮಹಮ್ಮದ್ ನಜ್ಹತ್ ಉಲ್ಲಾ, ಜಿಲ್ಲಾ ಪದವಿಪೂರ್ವ ಕಾಲೇಜ್ ಪ್ರಾಚಾರ್ಯ ಸಂಘದ ಅಧ್ಯಕ್ಷ ಪಂಡರಿನಾಥ್, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಯೋಗೀಶ್, ನಿಟ್ಟೂರು ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಗಣೇಶ್, ಹೊಸನಗರ ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಹಾಲಪ್ಪ ಸಂಕೂರ್, ವಿವಿಧ ಕಾಲೇಜಿನ ಪ್ರಾಚಾರ್ಯರು ಉಪಸ್ಥಿತರಿದ್ದರು.