

ಸೊರಬ: ಸೇವೆಯಲ್ಲಿ ಭಗವಂತನ ಕಾಣಲು ಸಾಧ್ಯ. ಒಳ್ಳೆಯ ಮನಸ್ಸಿನಿಂದ ಸೇವೆ ಮಾಡಿದರೆ ಸಾರ್ಥಕ ಬದುಕು ನಮ್ಮದಾಗುತ್ತದೆ. ಗುರು ಹಿರಿಯರ ಮಾರ್ಗದಲ್ಲಿ ಜೀವನ ಮುನ್ನಡೆಸಬೇಕು ಎಂದು ಸೊರಬ ಮುರುಘಾಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಸಾಗರದ ರೋಟರಿ ರಕ್ತನಿಧಿ ಕೇಂದ್ರದಿಂದ ಪಟ್ಟಣದ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಸದೃಢ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ. ರಕ್ತದಾನದಿಂದ ಉತ್ತಮ ಆರೋಗ್ಯ ನಮ್ಮದಾಗುವ ಜತೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸಾರ್ಥಕ ಭಾವ ದೊರೆಯುತ್ತದೆ ಎಂದು ತಿಳಿಸಿದರು.
ವೈದ್ಯ ಡಾ. ಎಂ.ಕೆ.ಭಟ್ ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠವಾಗಿದ್ದು, ರಕ್ತದಾನ ಮಾಡುವುದರಿಂದ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ. ದೈಹಿಕ, ಭಾವನಾತ್ಮಕ ಆರೋಗ್ಯಕ್ಕೆ ಅನೇಕ ಉಪಯೋಗ ಇವೆ. ರಕ್ತದಾನವನ್ನು ಸ್ವಇಚ್ಛೆಯಿಂದ ಮಾಡಬೇಕು. ಪಟ್ಟಣದಲ್ಲಿ ಹೆಚ್ಚು ರಕ್ತದಾನ ಶಿಬಿರಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಉದ್ರಿ ಆಯುಷ್ ವೈದ್ಯಾಧಿಕಾರಿ ಡಾ. ಎಂ.ಕೆ.ಮಹೇಶ್ ಮಾತನಾಡಿ, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಲು ಮುಂದಾಗಬೇಕು. ಸದೃಢ ದೈಹಿಕ, ಮಾನಸಿಕ ಆರೋಗ್ಯ ಹೊಂದಲು ಪೂರಕವಾಗುತ್ತದೆ ಎಂದು ತಿಳಿಸಿದರು. ರಕ್ತದಾನಿಗಳನ್ನು ಸನ್ಮಾನಿಸಯಿತು. ಬುದ್ದಿಮಾಂದ್ಯ ಶಾಲೆ ಮುಖ್ಯಸ್ಥ ಜಿ.ಬಿ.ರಾಮಪ್ಪ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ ಶೇಟ್, ಮಹೇಶ್ ಖಾರ್ವಿ, ಸಚಿನ್, ರಾಜು ಹಿರವಾಲಿ, ಸಂಪತ್‌ಕುಮಾರ್, ಬಸವಗೌಡ, ಪುಟ್ಟರಾಜ್ ಇತರರಿದ್ದರು.