

ಭದ್ರಾವತಿ: ಪ್ರತಿಭಾವಂತ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಪ್ರೋತ್ಸಾಹಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.
ಜನ್ನಾಪುರದ ಬಸವೇಶ್ವರ ವಿದ್ಯಾವರ್ಧಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಬದಲಾದ ಶೈಕ್ಷಣಿಕ ವಾತಾವರಣದಲ್ಲಿ ಹಣ ಪ್ರಮುಖವಾಗಿ ಬೇಕಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಬೇಕು. ಅವರನ್ನು ದತ್ತು ತೆಗೆದುಕೊಂಡು ಶಿಕ್ಷಣದ ಖರ್ಚು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಹಿರಿಯರು ವಿದ್ಯಾಸಂಸ್ಥೆ ಸ್ಥಾಪಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಈ ಶಾಲೆಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳು ಹಾಗೂ ಬಡವರಿಗೆ ಹೆಚ್ಚಿನ ಪ್ರವೇಶ ನೀಡಿ ಅವರನ್ನು ಪ್ರತಿಭಾವಂತ ವಿದ್ಯಾರ್ಥಿಗಳನ್ನಾಗಿ ಮಾಡುತ್ತಿರುವುದು ವಿಶೇಷ ಎಂದರು.
ಶಾಲೆಗೆ ಅಗತ್ಯ ಪರಿಕರಗಳನ್ನು ನೀಡಿದ ಕೂಡ್ಲಿಗೆರೆ ಹಾಲೇಶ್, ಹಿರಿಯ ಶಿಕ್ಷಕ ಮಲ್ಲಿಕಾರ್ಜುನ್, ದೈಹಿಕ ಶಿಕ್ಷಕ ಉಮೇಶ್ ಮುತ್ತಳ್ಳಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಬಿ.ಸಿದ್ದೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ, ಉದ್ಯಮಿ ಬಿ.ಕೆ.ಜಗನ್ನಾಥ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಶಿವಕುಮಾರ್, ನಿರ್ದೇಶಕರಾದ ಕೆ.ಎಚ್.ತೀರ್ಥಯ್ಯ, ಆರ್.ಮಲ್ಲಿಕಾರ್ಜುನ್, ಎಚ್.ಎಲ್.ಷಡಕ್ಷರಿ, ಬಿ.ವಿ.ಚಂದ್ರಪ್ಪ, ಜೆ.ಪಿ.ಎಚ್.ಚಂದ್ರಶೇಖರ್, ಎನ್.ಎಸ್.ಮಹೇಶ್ವರಪ್ಪ, ಉದಯ್ ಕುಮಾರ್, ಎಸ್.ಆರ್.ತಿಮ್ಮೇಶ್ ಇತರರಿದ್ದರು.