

ರಿಪ್ಪನ್‌ಪೇಟೆ: ಪ್ರಜಾಪ್ರಭುತ್ವ ಯಶಸ್ಸಿಗೆ ಮತದಾನ ಮಹತ್ವವಾಗಿದೆ. ಮತದಾನ ಪವಿತ್ರ ಕಾರ್ಯ ಎಂಬ ಅರಿವು ಎಲ್ಲರಲ್ಲೂ ಮೂಡಬೇಕು ಎಂದು ಹೊಸನಗರ ತಾಲೂಕು ಬಿಇಒ ಎಚ್.ಆರ್.ಕೃಷ್ಣಮೂರ್ತಿ ಹೇಳಿದರು.
ಸಮೀಪದ ಚಿಕ್ಕಜೇನಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಪಾಲಕರಿಗೆ ಮತದಾನದ ಮಹತ್ವ ತಿಳಿಸಬೇಕು. ಆಸೆ ಆಮಿಷಗಳಿಗೆ ಬಲಿಯಾಗದೆ ಪ್ರಾಮಾಣಿಕ ಮತದಾನ ನಡೆಯಬೇಕು ಎಂದರು.
ಮುಖ್ಯಶಿಕ್ಷಕ ಟಿ.ಎಂ.ಶಿವಾಜಿ ಮಾತನಾಡಿ, ಮತದಾನ ದೇಶದ ಪ್ರಗತಿಗೆ ದಿಕ್ಸೂಚಿಯಾಗಿದೆ ಎಂದರು. ಶಿಕ್ಷಣ ಸಂಯೋಜಕ ಕರಿಬಸಪ್ಪ, ಸಿಆರ್‌ಪಿ ಸಂತೋಷಕುಮಾರ್, ದುಗ್ಗಪ್ಪ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.