

ಸೊರಬ: ನಿರಂತರ ಶ್ರಮ, ಸಾಧಿಸುವ ಛಲವಿದ್ದರೆ ಉತ್ತಮ ಸಾಧನೆ ಮಾಡಬಹುದು ಎಂದು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪಟ್ಟಣದಲ್ಲಿ ಸನ್ಮಾನಿಸಿ ಮಾತನಾಡಿ, ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸುವುದು ಸಂಘ ಸಂಸ್ಥೆಗಳ ಕರ್ತವ್ಯ. ನಮ್ಮ ಸಂಸ್ಥೆ 600ಕ್ಕೂ ಅಧಿಕ ಸಾಧಕರನ್ನು ಗುರುತಿಸಿ ಸನ್ಮಾನಿಸಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಮಾತನಾಡಿ, ತಾಲೂಕಿನಲ್ಲಿ 34 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಕೂಡ ಹೆಚ್ಚು ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. 400ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶೇ. 85 ಅಂಕ ಪಡೆದಿದ್ದಾರೆ. ಫೇಲಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿದೆ. ಇಲಾಖೆ ಮುಂದಿನ ಎರಡು ಪರೀಕ್ಷೆಗೆ ಸಿದ್ಧತೆ ನಡೆಸಿದೆ ಎಂದರು.
ಕೋಟಿಪುರ ಎವರಾನ್ ಶಾಲೆಯ ಎಸ್.ಎಚ್. ಸಮಯ್ 623, ಸ್ವಾಮಿ ವಿವೇಕಾನಂದ ಶಾಲೆಯ ಕೆ.ಲಿಖಿತಾ 623, ಸಿರಿಗೌರಿ 622, ಅಮೂಲ್ಯಾ 621 ಅಂಕ ಪಡೆದಿದ್ದು, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾಜ ಚಿಂತಕ ರಾಜಪ್ಪ ಮಾಸ್ತರ್, ಹಾಲೇಶ್ ನವುಲೆ, ಪುರಸಭೆ ಉಪಾಧ್ಯಕ್ಷೆ ಶ್ರೀರಂಜನಿ, ಸಮಾಜ ಸೇವಕ ರಾಜು ಹಿರಿಯಾವಲಿ, ಟೌನ್ ವೀರಶೈವ ಅಧ್ಯಕ್ಷ ಎಂ.ಆರ್.ವಿಶ್ವನಾಥ, ಚಂದ್ರಣ್ಣ ನಿಜಗುಣ, ಜಾನಕಪ್ಪ ಯಲಸಿ, ಲಕ್ಷ್ಮಣ್ ಸಾಗರ್, ಮೇಘಶ್ರೀ, ಶಿವಾನಂದ ನಾಯರ್, ಡಿ.ಶಿವಯೋಗಿ, ಸರಸ್ವತಿ ನಾವುಡ, ರೇಣುಕಮ್ಮ ಗೌಳಿ ಇತರರಿದ್ದರು.