

ಸಾಗರ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಅವರಿಗೆ ಸೂಕ್ತ ಪ್ರೋತ್ಸಾಹ ನೀಡುವ ಜತೆಗೆ ಗೌರವಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ನಗರದ ಕೆಳದಿ ಚನ್ನಮ್ಮ ವೃತ್ತದಲ್ಲಿರುವ ಸಾಧನಾ ಮಹಿಳಾ ಸ್ವಸಹಾಯ ಸಂಘದಿಂದ ಲಲಿತಾ ವಿ. ರಾವ್ ಸ್ಮರಣಾರ್ಥ ನೆಹರು ಮೈದಾನದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಮಹಿಳಾ ಥ್ರೋಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ರಾಷ್ಟ್ರಪತಿ, ಮುಖ್ಯಮಂತ್ರಿ ಸೇರಿ ದೇಶದ ಉನ್ನತ ಹುದ್ದೆಗಳನ್ನು ಮಹಿಳೆಯರು ಅಲಂಕರಿಸುತ್ತಿರುವುದು ಅಭಿನಂದನೀಯ ಎಂದರು.
ಸಾಗರದಲ್ಲಿ ರಾಜ್ಯಮಟ್ಟದ ಸ್ಪರ್ಧೆ ಏರ್ಪಡಿಸುವ ಮೂಲಕ ಸಾಧನಾ ಮಹಿಳಾ ಸ್ವಸಹಾಯ ಸಂಘ ದೊಡ್ಡ ಪ್ರಯತ್ನ ಮಾಡಿದೆ. ಇಂತಹ ಕಾರ್ಯಕ್ಕೆ ಸದಾ ಬೆಂಬಲ ನೀಡುತ್ತೇನೆ. ತಾಲೂಕಿನಲ್ಲಿ ಆಟದ ಮೈದಾನ ಮತ್ತು ಪಾರ್ಕ್ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತಿದ್ದು, ವಿಶೇಷ ಅನುದಾನ ತರಲಾಗುವುದು ಎಂದು ಹೇಳಿದರು.
ಸಾಧನಾ ಸಂಘದ ಅಧ್ಯಕ್ಷೆ ಕೆ.ಎಸ್.ಕೃಷ್ಣವೇಣಿ, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಲಲಿತಮ್ಮ, ಮಧುಮಾಲತಿ, ಗಣಪತಿ, ಕೆ.ಆರ್.ಗಣೇಶ್‌ಪ್ರಸಾದ್, ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಟಿ.ಪಿ.ಸುಬ್ರಹ್ಮಣ್ಯ, ಗೀತಾ ಪಟಗಾರ್, ಪಂದ್ಯಾವಳಿ ಸಮಿತಿ ಅಧ್ಯಕ್ಷೆ ರೂಪಾ, ಸರಿತಾ, ರೇಖಾ, ಅನಿತಾ, ಅಂಬಿಕಾ, ಪೂರ್ಣಿಮಾ ಇತರರಿದ್ದರು.