

ಭದ್ರಾವತಿ: ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಸಾಮರ್ಥ್ಯ ವೃದ್ಧಿಸುವಲ್ಲಿ ಚೆಸ್ ಸಹಕಾರಿ ಎಂದು ಬಿಇಒ ಎ.ಕೆ.ನಾಗೇಂದ್ರಪ್ಪ ಹೇಳಿದರು.
ನಗರದ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಶುಗರ್ ಟೌನ್ ಲಯನ್ಸ್ ಕ್ಲಬ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬಿಇಒ ಕಚೇರಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಯೋಗಾಸನ ಮತ್ತು ಚೆಸ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ರಾಮಾಯಣ, ಮಹಾಭಾರತ ಕಾಲದಿಂದಲೂ ಚದುರಂಗ ಆಟಕ್ಕೆ ವಿಶೇಷ ಮಹತ್ವ ಇದೆ. ವಿದ್ಯಾರ್ಥಿಗಳು ಇದರ ಮಹತ್ವ ಅರಿತು ಕ್ರೀಡಾಭ್ಯಾಸ ಮಾಡಬೇಕು. ಚೆಸ್‌ನಂತರ ಕ್ರೀಡಾಭ್ಯಾಸ ಬೌದ್ಧಿಕ ಸಾಮರ್ಥ್ಯ ವೃದ್ಧಿಸಿದರೆ, ಹೊರಾಂಗಣ ಆಟಗಳು ಶಾರೀರಿಕವಾಗಿ ಆರೋಗ್ಯ ಒದಗಿಸುತ್ತವೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಪಂಚಾಕ್ಷರಿ ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕರು ಇತರ ಕ್ರೀಡೆಗಳ ಜತೆಗೆ ಚೆಸ್‌ನಂತಹ ಕ್ರೀಡೆಗೂ ಮತ್ತು ಅದರ ಆಟದ ನೀತಿ ನಿಯಮಗಳ ಬಗ್ಗೆ ಆಸಕ್ತಿ ಮೂಡಿಸಬೇಕು. ಮಕ್ಕಳು ಟಿವಿ, ಮೊಬೈಲ್‌ಗಳಿಂದ ದೂರ ಉಳಿಯಲು ಸಾಧ್ಯ ಎಂದರು.
ಡಾ. ಗುರುರಾಜ್, ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಎ.ಎನ್.ಕಾರ್ತಿಕ್, ಲಯನ್ಸ್ ಕ್ಲಬ್ ಹಿರಿಯ ಸದಸ್ಯರಾದ ಮದಿಯಾಳಗನ್, ನಿತ್ಯಾನಂದ ಪೈ, ಶಿಕ್ಷಣ ಇಲಾಖೆಯ ಮೀನಾ ಕೌಸರ್, ರಾಜಾನಾಯ್ಕ, ಮಲ್ಲಿಕಾರ್ಜುನ್ ಇತರರಿದ್ದರು.