

ತೀರ್ಥಹಳ್ಳಿ: ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ವರಮಹಾಲಕ್ಷ್ಮೀ ಆಚರಣೆಗೆ ಅತ್ಯಂತ ಮಹತ್ವವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಬಿಜೆಪಿ ಮಂಡಲದ ಮಹಿಳಾ ಮೋರ್ಚಾದಿಂದ ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ಆಯೋಜಿಸಿದ್ದ ವರಮಹಾಲಕ್ಷ್ಮೀ ವ್ರತಾಚರಣೆಯಲ್ಲಿ ಮಾತನಾಡಿ, ಮಾತೃಶಕ್ತಿಯೇ ದೇಶದ ಬೆನ್ನೆಲುಬು. ಮಹಿಳೆಗೆ ಶಕ್ತಿ ಬಂದರೆ ಅದು ಕುಟುಂಬಕ್ಕೆ ಶಕ್ತಿ. ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬರಲು ಕೇಂದ್ರ ಸರ್ಕಾರ ಸಂಜೀವಿನಿ ಮತ್ತಿತರ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.
ಪಹಲ್ಗಾಮ್‌ಗೆ ಪ್ರವಾಸಕ್ಕೆ ತೆರಳಿದ್ದ 26 ಜನರನ್ನು ಭಯೋತ್ಪಾದಕರು ಗುಂಡಿಟ್ಟು ಕೊಂದಿದ್ದರು. ಪ್ರತೀಕಾರವಾಗಿ ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನದ ಉಗ್ರ ಚಟುವಟಿಕೆ ಕೇಂದ್ರಗಳನ್ನು ನಮ್ಮ ಸೈನಿಕರು ನಾಶ ಮಾಡಿ ಭಾರತೀಯ ಮಹಿಳೆಯ ಸಿಂಧೂರದ ತಾಕತ್ತು ತೋರಿಸಿದೆ ಎಂದರು.
ಎಡಪಂಥೀಯರಿಂದ ದೇಶದಲ್ಲಿ ಧಾರ್ಮಿಕ ಭಾವನೆ ಅಳಿಸುವ ಷಡ್ಯಂತ್ರ ನಡೆದಿದೆ. ಒಬ್ಬ ವ್ಯಕ್ತಿ ಹೇಳಿಕೆ ಆಧಾರದಲ್ಲಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ಲಕ್ಷಾಂತರ ರೂ. ಹಣ ಲೋಪ ಮಾಡುತ್ತಿದೆ. ಇದನ್ನು ವಿರೋಧಿಸಿ ಆ.19ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಮಾತನಾಡಿ, ಕೆಲ ವಿದ್ರೋಹಿ ಶಕ್ತಿಗಳು ಧಾರ್ಮಿಕ ನಂಬಿಕೆಗೆ ಧಕ್ಕೆ ತರಲು ಯತ್ನಿಸುತ್ತಿವೆ. ಇದರಿಂದ ಭಾರತೀಯ ಕುಟುಂಬ ವ್ಯವಸ್ಥೆ ಶಿಥಿಲಗೊಳ್ಳುವ ಆತಂಕ ಎದುರಾಗಿದೆ. ಪ್ರತಿ ಕುಟುಂಬವೂ ನಮ್ಮ ಹಬ್ಬಗಳನ್ನು ಆಚರಿಸುವ ಮೂಲಕ ಕುಟುಂಬ ವ್ಯವಸ್ಥೆ ಗಟ್ಟಿಗೊಳಿಸಬೇಕು ಎಂದರು.
ವರಮಹಾಲಕ್ಷ್ಮೀ ಆಚರಣೆ ಕುರಿತು ಕೆ.ಎಂ.ಜಯಶೀಲಾ ವಿವರಿಸಿದರು. ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಯಶೋದಾ ಮಂಜುನಾಥ್, ಕುಸುಮಾ ಮಂಜುನಾಥ್, ಜ್ಯೋತಿ ಮೋಹನ್, ಭಾರತಿ ಸುರೇಶ್ ಇತರರಿದ್ದರು.