

ಸಾಗರ: ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ಬದಲಾಗುತ್ತಿದ್ದು, ಜಂಕ್‌ುಡ್ ಬಳಕೆಯಿಂದ ಸಮಸ್ಯೆಗಳಿಗೆ ಒಳಗಾಗುತ್ತಿದ್ದೇವೆ. ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರಗಳನ್ನು ಸೇವಿಸಬೇಕು ಎಂದು ಪುರಪ್ಪೆಮನೆ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕೆ.ವಿ.ಪತಂಜಲಿ ಹೇಳಿದರು.
ನಗರದ ಇನ್ನರ್‌ವ್ಹೀಲ್ ಕ್ಲಬ್, ಸಾಗರ್ ಯುನಿಕ್ ಸಹಯೋಗದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿರಿಯರು ಉತ್ತಮ ಆರೋಗ್ಯಕ್ಕೆ ಕಾಲಕಾಲಕ್ಕೆ ಅವಶ್ಯವಿರುವ ಒಳ್ಳೆಯ ಆಹಾರ ಪರಂಪರೆ ಅನುಸರಿಸುತ್ತಿದ್ದರು. ಸೂಕ್ತ ಕಾರಣಗಳ ಬಗ್ಗೆ ಪ್ರಸ್ತಾಪಿಸಿದ್ದರು ಎಂದು ತಿಳಿಸಿದರು.
ಸಾಗರ ಗಂಗೋತ್ರಿ ಕಾನೂನು ಕಾಲೇಜಿನ ಸಹಪ್ರಾಧ್ಯಾಪಕಿ ಜ್ಯೋತಿ ಆನಂದ್ ಮಾತನಾಡಿ, ಪ್ರಸ್ತುತ ದೇಶ ಎಲ್ಲ ಸಂಗತಿಗಳಲ್ಲಿ ಮುಂಚೂಣಿಯಲ್ಲಿದ್ದರೂ ಮಹಿಳೆಯರ ಮೇಲೆ ಆಗುತ್ತಿರುವ ಶೋಷಣೆ, ಅತ್ಯಾಚಾರ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಈ ಬಗ್ಗೆ ಜಾಗೃತಗೊಳಿಸುವ ಅವಶ್ಯಕತೆ ಇದೆ. ಪ್ರತಿಯೊಬ್ಬರಿಗೂ ಕಾನೂನಿನ ಮಹತ್ವ ಪರಿಚಯಿಸಬೇಕು ಎಂದರು.
ಬೆಂಕಿರಹಿತ ಅಡುಗೆ ಮಾಡುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸುನಂದಮ್ಮ ಶಶಿಭೂಷಣ್, ಗೌರಮ್ಮ ರಾಮಪ್ಪ ಅವರನ್ನು ಸನ್ಮಾನಿಸಲಾಯಿತು. ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷ ಪ್ರವೀಣ್ ವೆಂಕಟರಾವ್, ರೋಟರಿ ಕ್ಲಬ್ ಅಧ್ಯಕ್ಷ ಡಾ. ನಿರಂಜನ್ ಹೆಗಡೆ, ಪದ್ಮಾ ರಾಜೀವ್, ರಾಜೇಶ್ವರಿ ಅಂಕದ, ರೂಪಾ ಶಶಿಧರ್, ಅನ್ನಪೂರ್ಣಾ ಶಾಂತಕುಮಾರ್ ಇತರರಿದ್ದರು.