

ಶಿಕಾರಿಪುರ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ. ವಚನ ಸಾಹಿತ್ಯದ ಸಾರ್ವಕಾಲಿಕ ಸಂದೇಶಗಳು ಎಂದೆಂದಿಗೂ ಪ್ರಸ್ತುತ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜು ಉಪನ್ಯಾಸಕ ಡಾ. ಸೋಮಶೇಖರ್ ಹೇಳಿದರು.
ಕುಮದ್ವತಿ ಪ್ರಥಮದರ್ಜೆ ಕಾಲೇಜು ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಕುಮದ್ವತಿ ಪ್ರಥಮದರ್ಜೆ ಕಾಲೇಜು ಕನ್ನಡ ಭಾಷಾ ವೇದಿಕೆ, ಸುರಭಿ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ಕಾನೂರು ನಾಗಪ್ಪ-ಹೇಮಲತಾ ದತ್ತಿ ಹಾಗೂ ಸುರಭಿ ಬಳಗದ ಸಾಹಿತ್ಯ ಸಂಸ್ಕೃತಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬಸವಣ್ಣ ಹಾಗೂ ಅಕ್ಕಮಹಾ ದೇವಿ ವಚನ ಸಾಹಿತ್ಯ ಕುರಿತು ಮಾತನಾಡಿದರು.
ಎಲ್ಲರನ್ನೂ ಸಮಾನವಾಗಿ ಕಾಣುವ ತತ್ವವನ್ನು ಬಸವಣ್ಣ ಅವರು ಸಾರಿದ್ದರು. ಕಾಯಕ ತತ್ವವನ್ನು ಪ್ರತಿಪಾದಿಸಿದವರು ಕಾಯಕದ ಮೂಲಕ ದೇವರನ್ನು ಕಾಣಬೇಕು ಎಂದಿದ್ದರು. ವಚನ ಸಾಹಿತ್ಯ ಆಲೋಚನಾ ಶಕ್ತಿಯನ್ನು ಬೆಳೆಸುತ್ತದೆ. ಬಸವಣ್ಣ, ಅಕ್ಕಮಹಾದೇವಿ ಸೇರಿ ಹಲವು ಶರಣರು ಸಮಾನತೆ ತತ್ವ ಸಾರಿದ್ದರು ಎಂದು ತಿಳಿಸಿದರು.
ಸಾಹಿತ್ಯ ಕ್ಷೇತ್ರಕ್ಕೆ ಶಿಕಾರಿಪುರ ತಾಲೂಕಿನ ಕೊಡುಗೆ ವಿಷಯ ಕುರಿತು ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎ.ಬಿ.ಸುಧೀರ್, ತಾಲೂಕಿನಲ್ಲಿ ಹಲ್ಮಿಡಿ ಶಾಸನಕ್ಕಿಂತ ಪುರಾತನ ಕನ್ನಡದ ಸಿಂಹಕಟಾಂಜನ ಶಾಸನ ತಾಲೂಕಿನ ತಾಳಗುಂದ ಗ್ರಾಮದಲ್ಲಿ ದೊರೆತಿದೆ. ಮೊದಲ ಶಾಸನ ಎಂದು ಘೋಷಣೆ ಮಾಡಲು ಪ್ರಯತ್ನ ನಡೆಯುತ್ತಿದೆ ಎಂದರು.
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಹೆಚ್ಚು ಜ್ಞಾನಪೀಠ ಪ್ರಶಸ್ತಿ ಕನ್ನಡ ಭಾಷೆಗೆ ದೊರೆತಿದೆ. ನಮ್ಮ ಭಾವನೆ ವ್ಯಕ್ತಪಡಿಸಲು ಮಾತೃಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಭಾಷೆ ಕಲಿಯಿರಿ, ಆದರೆ ಮಾತೃಭಾಷೆ ಕನ್ನಡವನ್ನು ಮರೆಯಬಾರದು. ಪ್ರತಿಯೊಬ್ಬರೂ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು. ಡಾ. ಕೆ.ಸಿ.ರವೀಂದ್ರ ಕುಮದ್ವತಿ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ
ತಾಲೂಕು ಕಸಾಪ ಅಧ್ಯಕ್ಷ ಎಚ್‌ಎಸ್.ರಘು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್.ಹುಚ್ರಾಯಪ್ಪ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಬಿ.ಪಾಪಯ್ಯ, ದತ್ತಿದಾನಿ, ಸುರಭಿ ಬಳಗ ಅಧ್ಯಕ್ಷ ಮೃತ್ಯುಂಜಯ, ಉಪಾಧ್ಯಕ್ಷ ಯು.ಎಸ್.ರುದ್ರಯ್ಯ, ಕಾರ್ಯದರ್ಶಿ ಉಮೇಶ್, ಈರಣ್ಣ, ಕೋಟೋಜಿರಾವ್ ಇತರರಿದ್ದರು.