

ಶಿರಾಳಕೊಪ್ಪ: ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಿದ್ದ ಓಂ ಗಣಪತಿಯನ್ನು ಭಾನುವಾರ ಅದ್ದೂರಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.
ಓಂ ಗಣಪತಿ ಸಮಿತಿ, ಉಡಚಲಮ್ಮ ದೇವಿ ಯುವಕ ಸಂಘ ಹಾಗೂ ಓಂ ಹಿಂದು ಸಂಘಟನಾ ಮಹಾಮಂಡಳಿ ಆಶ್ರಯದಲ್ಲಿ ಮೆರವಣಿಗೆ ನಡೆಸಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಮಧ್ಯಾಹ್ನ ಬಸ್ ನಿಲ್ದಾಣ ವೃತ್ತದಿಂದ ಆರಂಭವಾದ ಮೆರವಣಿಗೆ ಶಿಕಾರಿಪುರ ರಸ್ತೆ, ಕೆಳಗಿನಕೇರಿ, ಹೊಂಡದಕೇರಿ ಮುಖಾಂತರ ಹಿರೇಕೆರೂರು ರಸ್ತೆ ಮೂಲಕ ಪುನಃ ಬಸ್ ನಿಲ್ದಾಣಕ್ಕೆ ಆಗಮಿಸಿತು.
ಮೆರವಣಿಗೆಯಲ್ಲಿ ಡಿಜೆ ಶಬ್ದಕ್ಕೆ ಯುವಕರು ನೃತ್ಯ ಮಾಡುತ್ತ ಸಾಗಿದರು. ಮೆರವಣಿಗೆಯಲ್ಲಿ ವಿವಿಧ ವಾದ್ಯಗಳ ತಾಳಕ್ಕೆ ಸಾವಿರಾರು ಯುವಕರು ಮೈಮರೆತು ನರ್ತಿಸಿದರು. ರಸ್ತೆ ಬದಿ ಮೆರವಣಿಗೆ ವೀಕ್ಷಿಸುತ್ತಿದ್ದ ಜನರು ಪ್ರೋತ್ಸಾಹ ನೀಡಿದರು.
ಮೆರವಣಿಗೆ ಹೊರಡುವ ಮೊದಲು ಪಟ್ಟಣದ ಗ್ರಾಮದೇವತೆ ಉಡಚಲಮ್ಮ ದೇವಿಗೆ ಪೂಜೆ ಸಲ್ಲಿಸಿದ ನಂತರ ಬೃಹತ್ ಹಾರಗಳನ್ನು ಜೆಸಿಬಿ ಮೂಲಕ ಹಾಕಲಾಯಿತು. ಸೊರಬ ರಸ್ತೆಯ ಮೂಲಕ ಸಾಗಿ ಪಟ್ಟಣ ಹೊರವಲಯದ ವಡ್ಡಿನಕೆರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ಗಣೇಶ ಸಮಿತಿ ಸಂಚಾಲಕ ರಾಘವೇಂದ್ರ ಪೂಜಾರಿ, ಅಧ್ಯಕ್ಷ ಸಂತೋಷ, ಉಪಾಧ್ಯಕ್ಷ ವೀರೇಶ ಸ್ವಾಮಿ, ನಂದೀಶ್ ಅಗಸ್ತ್ಯ, ಮಂಜು, ವಿಜಯ್, ರವಿ, ಸಿದ್ದು ಕೇದಾರ, ನಂದೀಶ್ ಮತ್ತಿತರರು ಇದ್ದರು.