ಇಬ್ಬರು ಹೆಣ್ಣುಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ; ಪತಿ ಆಡಿದ ಆ ಮಾತುಗಳೇ ಮೂವರ ದುರಂತ ಅಂತ್ಯಕ್ಕೆ ಕಾರಣ! | Shiny Death

ವಿಜಯವಾಣಿ - 2025-03-09T134911.529
Published on

Shiny Death: ಪತಿಯೊಂದಿಗೆ ದೂರವಾಣಿ ಕರೆಯಲ್ಲಿ ಕೆಲ ನಿಮಿಷಗಳ ಕಾಲ ಮಾತನಾಡಿದ ಬೆನ್ನಲ್ಲೇ ತನ್ನಿಬ್ಬರ ಹೆಣ್ಣುಮಕ್ಕಳ ಜತೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೊಟ್ಟಾಯಂನಲ್ಲಿ ವರದಿಯಾಗಿದೆ. ವೇಗವಾಗಿ ಬರುತ್ತಿದ್ದ ರೈಲಿನ ಮುಂದೆ ಹಾರಿ ಪ್ರಾಣಬಿಟ್ಟ ಮಹಿಳೆ, ತನ್ನೊಂದಿಗೆ ತನ್ನ ಮಕ್ಕಳ ಪ್ರಾಣವನ್ನು ಕಸಿದುಕೊಂಡಿದ್ದಾರೆ. ಈ ಭೀಕರ ಘಟನೆ ಹಿಂದಿರುವ ಕಾರಣವೇನು ಎಂದು ತನಿಖೆ ಕೈಗೊಂಡ ಪೊಲೀಸರಿಗೆ ಆರಂಭದಲ್ಲೇ ಪತಿಯ ಮೇಲೆ ಅನುಮಾನ ಮೂಡಿತ್ತು. ಇದೀಗ ವಿಚಾರಣೆ ಬಳಿಕ ಆತ ಆಡಿದ ಮಾತುಗಳೇನು ಎಂಬುದು ಸ್ಪಷ್ಟವಾಗಿದೆ.

ಸಾಲದ ಶೂಲ

ರೈಲಿನ ಮುಂದೆ ಜಿಗಿದು ತನ್ನ ಮಕ್ಕಳೊಂದಿಗೆ ದುರಂತ ಅಂತ್ಯ ಕಂಡ ಮಹಿಳೆ ಶೈನಿ, ತಾನು ಎದುರಿಸುತ್ತಿದ್ದ ಕಠಿಣ ಪರಿಸ್ಥಿತಿ ಮತ್ತು ಮನೆಯಲ್ಲಿದ್ದ ಸವಾಲುಗಳನ್ನು ಕರಿಂಕುನ್ನಂ ಕುಟುಂಬಶ್ರೀ ಅಧ್ಯಕ್ಷೆ ಉಷಾ ಅವರೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ಮನಬಿಚ್ಚಿ ಹಂಚಿಕೊಂಡಿದ್ದರು. ಇವರಿಬ್ಬರ ನಡುವಿನ ಫೋನ್ ಸಂಭಾಷಣೆಯನ್ನು ಹೊರತೆಗೆದ ಖಾಕಿ ಪಡೆಗೆ, ಶೈನಿ ಸಾವಿನ ಹಿಂದೆ ಸಾಲದ ಶೂಲವಿತ್ತು ಎಂಬುದು ಗೊತ್ತಾಗಿದೆ. ಆರ್ಥಿಕ ತೊಂದರೆಗಳ ಜತೆ ಜತೆಗೆ ಪತಿಯ ಅವಾಚ್ಯ ಪದಗಳ ಬಳಕೆ, ನಿಂದನೆ ಆಕೆಯ ಸಾವಿಗೆ ಕಾರಣ ಎಂಬುದು ಬಹಿರಂಗಗೊಂಡಿದೆ.

"ಎರಡು ತಿಂಗಳಾಗಿದೆ, ನೀವು ಸಾಲವನ್ನು ಮರುಪಾವತಿಸುವುದಿಲ್ಲವೇ?" ಎಂದು ಉಷಾ ಕೇಳಿದ್ದರು, ಇದಕ್ಕೆ ಪ್ರತಿಕ್ರಿಯಿಸಿದ ಮೃತ ಶೈನಿ "ಪ್ರಸ್ತುತ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ. ನೀನು ನನಗೆ ವಿಚ್ಛೇದನ ಕೊಟ್ಟ ತಕ್ಷಣವೇ ಹಣ ಪಾವತಿ ಮಾಡಲಾಗುವುದು. ಅಲ್ಲಿಯವರೆಗೂ ಅದರ ಬಗ್ಗೆ ಮಾತಿಲ್ಲ" ಎಂದು ಪತಿ ನೋಬಿ ಲಕೋಸ್ ಹೇಳಿರುವುದಾಗಿ ಶೈನಿ ಹೇಳಿದ್ದಾರೆ. "ಸದ್ಯದ ಪರಿಸ್ಥಿತಿಯಲ್ಲಿ ನಾನು ಬಹಳ ಅಸಹಾಯಕಳಾಗಿರುವೆ. ಮುಂದೆ ಏನು ಮಾಡಬೇಕು ತಿಳಿಯುತ್ತಿಲ್ಲ. ನನ್ನ ಹೆಸರಲ್ಲಿ ಸಾಲ ಪಡೆದಿರುವ ಅವರು, ನನಗೆ ಹಣ ಕೊಡುತ್ತಿಲ್ಲ. ಇದರಿಂದ ತೀವ್ರ ಆರ್ಥಿಕ ಮುಗ್ಗಟ್ಟು ಎದುರಾಗಿದೆ" ಎಂದು ಅಳಲು ತೋಡಿಕೊಂಡಿದ್ದರು.

ಪತಿಯ ಕಟು ಮಾತು

ಪತಿಯಲ್ಲದೇ ಶೈನಿಯ ಹೆಸರಿನಲ್ಲಿ ಕುಟುಂಬಶ್ರೀಯಿಂದ ಆಕೆಯ ಅತ್ತೆ ಮತ್ತು ಮಾವ ಕೂಡ ಸಾಲ ಪಡೆದಿದ್ದರು ಎಂದು ವರದಿಯಾಗಿದೆ. ಪತಿಯೊಂದಿಗೆ ವಿಚ್ಛೇದನ ಪ್ರಕರಣ ಇತ್ಯರ್ಥವಾದ ನಂತರವೇ ನಿನಗೆ ಹಣವನ್ನು ನೀಡುವುದಾಗಿ ಕುಟುಂಬಸ್ಥರು ಹೇಳಿದ್ದಾರೆ. ಈ ಎಲ್ಲಾ ವಿಷಯದಿಂದ ತೀವ್ರ ಮನನೊಂದ ಶೈನಿ (42) ಮತ್ತು ಅವರು ಇಬ್ಬರು ಹೆಣ್ಣುಮಕ್ಕಳಾದ ಅಲೀನಾ (11) ಮತ್ತು ಇವಾನ್ (10) ರೈಲಿನ ಮುಂದೆ ಹಾರಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಲೋಕೋ ಪೈಲಟ್ ಎಟ್ಟುಮನೂರ್ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ. ಹಳಿಗಳ ಮೇಲೆ ಛಿದ್ರವಾಗಿ ಬಿದ್ದಿದ್ದ ಶವಗಳನ್ನು ವಶಪಡಿಸಿಕೊಂಡ ಖಾಕಿ ಪಡೆ, ನೋಬಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net