

ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆಗೆ ನೂತನ ಮೇಯರ್, ಡೆಪ್ಯುಟಿ ಮೇಯರ್ ಆಯ್ಕೆ ನಡೆದಿದ್ದು, ಈ ಎರಡೂ ಸ್ಥಾನಗಳು ಬಿಜೆಪಿಗೆ ಪಾಲಾಗಿವೆ. ಶಿವಮೊಗ್ಗ ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಬಿಜೆಪಿಯ ಶಿವಕುಮಾರ್, ಡೆಪ್ಯುಟಿ ಮೇಯರ್ ಆಗಿ ಬಿಜೆಪಿಯ ಲಕ್ಷ್ಮೀ ಶಂಕರನಾಯಕ್ ಆಯ್ಕೆ ಆಗಿದ್ದಾರೆ. ಬೆಂಗಳೂರು ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲ ಬಿಸ್ವಾಸ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಘೋಷಣೆ ಮಾಡಲಾಗಿದೆ.
ಇಂದು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಮೇಯರ್ ಹಾಗೂ ಡೆಪ್ಯುಟಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ 26 ಮತ, ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ 11 ಮತಗಳ ಚಲಾವಣೆ ನಡೆಯಿತು. ಪಾಲಿಕೆ ಸದಸ್ಯ ನಾಗರಾಜ್ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದರು.
ನೂತನ ಮೇಯರ್ ಹಾಗೂ ಡೆಪ್ಯುಟಿ ಮೇಯರ್ಗೆ ಶಾಸಕರಾದ ಕೆ.ಎಸ್. ಈಶ್ವರಪ್ಪ, ಆಯನೂರು ಮಂಜುನಾಥ್ ಹಾಗೂ ಕೆ.ಬಿ.ಅಶೋಕ್ ನಾಯಕ್ ಶುಭ ಕೋರಿದ್ದಾರೆ.