

Shilpa Shetty: ನಿರ್ದೇಶಕ ಪ್ರೇಮ್ ನಿರ್ದೇಶಿಸಿರುವ ಕೆಡಿ- ದಿ ಡೆವಿಲ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ, ಹಲವು ವರ್ಷಗಳ ಬಳಿಕ ಸ್ಯಾಂಡಲ್ವುಡ್ಗೆ ರೀ-ಎಂಟ್ರಿ ಕೊಟ್ಟಿದ್ದಾರೆ. ವಿ. ರವಿಚಂದ್ರನ್ ಅವರೊಂದಿಗೆ ಪ್ರೀತ್ಸೋದ್ ತಪ್ಪಾ? ಚಿತ್ರದಲ್ಲಿ ಅಭಿನಯಿಸಿದ್ದ ಶಿಲ್ಪಾ, ನಂತರದಲ್ಲಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೀಗ, ನಟ ಧ್ರುವ ಸರ್ಜಾ ಹೀರೋ ಆಗಿ ಅಭಿನಯದ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಎಂಟ್ರಿ ಕೊಟ್ಟಿರುವುದು ಅವರ ಕನ್ನಡ ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಕೆಡಿ ಚಿತ್ರದ ರಿಲೀಸ್ ಬೆನ್ನಲ್ಲೇ ಬ್ಯಾಕ್ ಟು ಬ್ಯಾಕ್ ಪ್ರಚಾರ ಕಾರ್ಯದಲ್ಲಿ ಬಿಜಿಯಾಗಿರುವ ನಟಿ, ಇತ್ತೀಚೆಗಷ್ಟೇ ಸಿನಿಮಾದ ಟೀಸರ್ ಈವೆಂಟ್ನಲ್ಲಿ ತಾವ್ಯಾಕೆ ಇಲ್ಲಿಯವರೆಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ನಾನು ಬಾಲಿವುಡ್ ಸೇರಿದಂತೆ ತಮಿಳು, ಕನ್ನಡ, ತೆಲುಗು ಚಿತ್ರರಂಗಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ, ಮಾಲಿವುಡ್ನಲ್ಲಿ ಅಭಿನಯಿಸಿಲ್ಲ. ಇದಕ್ಕೆ ಕಾರಣ ಬೇರೇನೂ ಇಲ್ಲ. ಮಲಯಾಳಂನ ಒಂದಷ್ಟು ಚಿತ್ರಗಳಿಗೆ ನನಗೆ ಆಫರ್ ಬಂದಿತ್ತು. ಆದ್ರೆ, ನಾನೇ ಒಪ್ಪಿಕೊಳ್ಳಲಿಲ್ಲ. ಕಾರಣ ನನ್ನಲ್ಲಿದ್ದ ಭಯ ಎಂದಿದ್ದಾರೆ.
ನನಗೆ ಮಲಯಾಳಂ ಸಿನಿಮಾಗಳು ತುಂಬಾನೇ ಇಷ್ಟ. ಭಾವನೆಗಳನ್ನು ನಿಭಾಯಿಸುವ ಹಾಗೂ ಅದನ್ನು ಬೆಳ್ಳಿಪರದೆಯ ಮೇಲೆ ತೋರಿಸುವ ಚಿತ್ರರಂಗದ ಕೆಲಸ ನಿಜಕ್ಕೂ ಅದ್ಭುತ. ಈ ಚಿತ್ರರಂಗದಲ್ಲಿ ನನಗೆ ಕೊಡುವ ಪಾತ್ರಕ್ಕೆ ನಾನು ಸಂಪೂರ್ಣವಾಗಿ ನ್ಯಾಯ ಒದಗಿಸುತ್ತೀನಿ ಅನ್ನೋ ನಂಬಿಕೆ ನನ್ನಲ್ಲಿ ಮೂಡಲಿಲ್ಲ. ಹೀಗಾಗಿ ಒಪ್ಪಿಕೊಳ್ಳಲಿಲ್ಲ. ಇದೇ ಕಾರಣಕ್ಕೆ ಹಿಂದುಳಿದೆ. ನೋಡೋಣ, ಮುಂದೊಂದು ದಿನ ಮಲಯಾಳಂ ಚಿತ್ರದಲ್ಲಿ ಅಭಿನಯಿಸುವೆ ಎಂದು ಹೇಳಿದರು,(ಏಜೆನ್ಸೀಸ್).